ಮೂಡಬಿದಿರೆ: ವೇದ ಹೇಗೆ ಶ್ರವ್ಯವಾಗಿತ್ತೋ ಹಾಗೆಯೇ ಈಗ ಯಕ್ಷಗಾನ ತಾಳಮದ್ದಳೆ ಶ್ರವ್ಯಕಾವ್ಯವಾಗಿ ನಮ್ಮ ನಡುವಿದೆ. ವಾಕ್ಯಾರ್ಥ ವಿಶ್ಲೇಷಣೆಯ ತಾಳಮದ್ದಲೆಯಲ್ಲಿ ಹೊಸ ಸಾಧ್ಯತೆಗಳನ್ನು ಶೋಧಿಸುತ್ತಿರುವ ಯಕ್ಷಗಾನ ತಾಳಮದ್ದಲೆ -ವಾಟ್ಸಾಪ್ಗ್ರೂಪ್ ಈ ರಂಗಕ್ಕೆ ಕೊಡುಗೆಯಾಗಬಲ್ಲ ಎಲ್ಲ ಸಾಮಥ್ರ್ಯಗಳನ್ನು ಅಭಿವ್ಯಕ್ತಿಸುತ್ತಿದೆ’ ಎಂದು ಶ್ರೀ ಕ್ಷೇತ್ರ ಕಟೀಲಿನ ವೇ.ಮೂ. ಶ್ರೀಹರಿನಾರಾಯಣದಾಸ ಆಸ್ರಣ್ಣ ಅಭಿಪ್ರಾಯಪಟ್ಟರು.

ಸಮಾಜ ಮಂದಿರ ಸಭಾದಲ್ಲಿ ಭಾನುವಾರ ನಡೆದ ಯಕ್ಷಗಾನ ತಾಳಮದ್ದಲೆ-ವಾಟ್ಸಾಪ್ ಗ್ರೂಪ್ನ ಪ್ರಥಮ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಆವರು `ತಾಳಮದ್ದಲೆಯಲ್ಲಿ ನಡೆಯುತ್ತಿರುವ ಸೃಜನಾತ್ಮಕವಾದ ಚಿಂತನೆಗಳು ಒಟ್ಟಿನಲ್ಲಿ ಈ ಕಲೆಯ ಬೆಳವಣಿಗೆಗೆ ಉತ್ತಮ ಕೊಡುಗೆಯಾಗಿ ಒದಗಿಬರಲಿ’ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಅರ್ಥಧಾರಿ, ಸಂಘಟಕ ಶ್ರೀಧರ ಡಿ. ಎಸ್. ಅವರು, ಪಾತ್ರದೊಂದಿಗೆ ಬೆರೆತು ಪಾತ್ರವಾಗಿಯೇ ಬಿಡುವ ಕಲಾವಿದರು ಈ ರಂಗಕ್ಕೆ ನೀಡಿದ, ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿಕೊಂಡು, `ಯಕ್ಷಗಾನಕ್ಕೆ, ತಾಳಮದ್ದಳೆ ನಡೆಸುವಾಗಲೆಲ್ಲ ಪ್ರಸಂಗಕರ್ತ ಹೆಸರನ್ನು ಉಲ್ಲೇಖಿಸುವುದು, ಅವರ ಬಗ್ಗೆ ವಿವರಣೆ ನೀಡುವುದು ಮುಖ್ಯವಾಗಬೇಕು; ವಾಟ್ಸಾಪ್ಗ್ರೂಪ್ನ ಕಲಾವಿದರಿಂದ ತಿಂಗಳಿಗೊಮ್ಮೆ ತಾಳಮದ್ದಲೆ ಸಂಘಟಿಸುವಂತಾಗಲಿ’ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಗ್ರೂಪಿನ ಸದಸ್ಯರಾದ ವಾದಿರಾಜ ಕಲ್ಲೂರಾಯರು ವೈಯಕ್ತಿಕ ನೆಲೆಯಲ್ಲಿ `ಯಕ್ಷ ವೈಭವ-ಕಿನ್ನಿಕಂಬ್ಳ’ ಮುಖೇನ ವಾರ್ಷಿಕವಾಗಿ ಕೊಡಮಾಡುವ `ವ್ಯಾಸ’ ಮತ್ತು `ಕನಕ’ ಪ್ರಶಸ್ತಿಗಳನ್ನು ಕ್ರಮವಾಗಿ ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತು ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ಅವರಿಗೆ ನೀಡಿ ಗೌರವಿಸಿದರು.
ಗ್ರೂಪ್ನ ಆಡ್ಮಿನ್ ವಿನಾಯಕ ಭಟ್ ಗಾಳಿಮನೆ ಸ್ವಾಗತಿಸಿದರು.ರಜನೀಶ ಹೊಳ್ಳ ನಿರೂಪಿಸಿದರು. ಗ್ರೂಪ್ ಆರಂಭಿಸಿದ ಆಡ್ಮಿನ್ ಸುನಿಲ್ ಕುಮಾರ್ ಹೊಲಾಡು ವಂದಿಸಿದರು. ಯಕ್ಷ ಸಂಘಟಕ, ಗ್ರೂಪ್ ಆಡ್ಮಿನ್ ಎಂ. ಶಾಂತಾರಾಮ ಕುಡ್ವ ಕಾರ್ಯಕ್ರಮ ಸಂಯೋಜಿಸಿ ಸಂಘಟಿಸಿದ್ದರು. ಗ್ರೂಪ್ನ ಸದಸ್ಯಕಲಾವಿದರಿಂದ ಸಂಕಯ್ಯ ಭಾಗವತರ `ಸತ್ತ್ವ ಪರೀಕ್ಷೆ ‘ (ಕೃಷ್ಣಾರ್ಜುನ ಕಾಳಗ) ಯಕ್ಷಗಾನ ತಾಳಮದ್ದಳೆ ನಡೆಯಿತು.