ಬಂಟ್ವಾಳ : ತಾಲೂಕಿನ ವಗ್ಗ,ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 65.3 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ 70.4 ಲ.ರೂ. ನಿವ್ವಳ ಲಾಭ ಗಳಿಸಿದೆ.ಹಾಗೂ ಸತತ ಶೇ.ನೂರು ಸಾಲ ವಸೂಲಾತಿ ನಡೆಸಿ ಎ ಗ್ರೇಡ್ ಹೊಂದಿದ್ದು ಸದಸ್ಯರಿಗೆ 15 ಶೇ.ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ ಅವರು ಹೇಳಿದ್ದಾರೆ.
ಅವರು ಜು.21 ರಂದು ಸಂಘದ ಕಛೇರಿಯ ಸಭಾಂಗಣದಲ್ಲಿ ಜರಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಂಘದಲ್ಲಿ ಈ ಬಾರಿ 623 ಎ ವರ್ಗದ ಸದಸ್ಯರ ನೋಂದಾವಣೆಯಾಗಿದ್ದು ಒಟ್ಟು ಸದಸ್ಯರ ಸಂಖ್ಯೆ 1828ಕ್ಕೇರಿದೆ. ಕಾವಳಪಡೂರು, ಕಾಡಬೆಟ್ಟು ಮತ್ತು ಕುಡಂಬೆಟ್ಟು ಗ್ರಾಮಗಳು ಸಂಘದ ವ್ಯಾಪ್ತಿಯಲ್ಲಿದ್ದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘವು 25 ಲಕ್ಷಕ್ಕೂ ಅಧಿಕ ಲಾಭಗಳಿಸಿದೆ. ನಿವ್ವಳ ಲಾಭ ವಿಂಗಡನೆಯಲ್ಲಿ ಸಾಮಾಜಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಹಕಾರಿ ಸದಸ್ಯರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಯೋಜನೆಗಳಾದ ಭಿಮಾ ಸುರಕ್ಷಾ ಮತ್ತು ಪಸಲ್ ಭಿಮಾ ಯೋಜನೆಗಳ ವಾರ್ಷಿಕ ಪ್ರೀಮಿಯಂ ಹೆಚ್ಚಾಗಿದ್ದು ಅವನ್ನು ಶೇಕಡಾ ಎರಡಕ್ಕೆ ಸೀಮಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಗುವುದೆಂದು ಸ್ಪಷ್ಟಪಡಿಸಿದರು. ಸಂಘವು ಈ ಬಾರಿಯ ಆರ್ಥಿಕ ವರ್ಷದ ಶೇಕಡಾ ಎರಡರಷ್ಟು ಬೆಳವಣಿಗೆಗೆ ಹರ್ಷ ವ್ಯಕ್ತಪಡಿಸಿದರು.2207pkt1

ಸಂಘದಲ್ಲಿ ವಿವಿಧ ಸೌಲಭ್ಯಗಳ ಜೊತೆ ಮೃತ ಸದಸ್ಯನ ಕುಟುಂಬಕ್ಕೆ 2ಸಾವಿರ ರೂ.ಸಹಾಯಧನ ,ಸಂಘದ ಸದಸ್ಯರು ಯಶಸ್ವಿನಿ ವಿಮಾ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಶೇಕಡಾ 50ರಷ್ಟು ಸಹಾಯಧನ ,48 ಗಂಟೆಯೊಳಗೆ ಸಾಲ ವಿತರಿಸಲು ವ್ಯವಸ್ಥೆ, ಸಾಮಾಜಿಕ ಕ್ಷೇತ್ರಕ್ಕೆ ಅಗತ್ಯ ಸಹಾಯ ನೀಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಂಘದೊಂದಿಗೆ ಜೋಡಿಸಿ ಸಮಾಜಮುಖಿ ಕಾರ್ಯವನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 67.34ಲ.ರೂ. ಪಾಲು ಬಂಡವಾಳವಿದ್ದು 74.09 ಲ.ರೂ. ನಿ„ಗಳಿವೆ. 11.15 ಕೋಟಿ ಠೇವಣಿಯೊಂದಿಗೆ 2.65 ಕೋಟಿ ಸಾಲ 16.59 ಕೋಟಿ ಸಾಲ ನೀಡಿಕೆ, 13.42 ಕೋಟಿ ಹೊರಬಾಕಿ ಸಾಲವಿದ್ದು 15.48 ಕೋಟಿ ದುಡಿಯುವ ಬಂಡವಾಳವಿದೆ. 2.38 ಕೋಟಿ ರೂ. ಹೂಡಿಕೆಯಿದ್ದು ಸತತ ನೂರು ಶೇಕಡಾ ವಸೂಲಾತಿಯೊಂದಿಗೆ ಆಡಿಟ್ ವರ್ಗೀಕರಣದಲ್ಲಿ ಸತತ 5 ಬಾರಿ ಏ ಗ್ರೇಡ್ ಹೊಂದಿದ್ದು ಸದಸ್ಯರಿಗೆ ಶೇಕಡಾ 15% ಡಿವಿಡೆಂಟ್ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 500 ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸ್ಕಾಲರ್‍ಶಿಪ್,ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಬಡ ಮಕ್ಕಳಿಗೆ ಪುಸ್ತಕ ಖರೀದಿಸಲು ಸಹಾಯ ಧನ, ಅಂಗವಿಕಲ ಮಕ್ಕಳಿಗೆ ತಲಾ 2 ಸಾವಿರ ರೂ.ಗಳಂತೆಸಹಾಯಧನ ವಿತರಿಸಲಾಯಿತು.ಉಪಾಧ್ಯಕ್ಷ ಅಮ್ಮು ರೈ ಹರ್ಕಾಡಿ, ಹಿರಿಯ ಸದಸ್ಯ ಪಿ. ಜಿನರಾಜ ಆರಿಗ, ನಿರ್ದೇಶಕರಾದ ಪಿ. ಚಂದಪ್ಪ ಪೂಜಾರಿ, ಕೆ. ಪೋಂಕ್ರ, ಬೆನೆಡಿಕ್ಟ್ ಡಿಸೋಜಾ, ಲಕ್ಷ್ಮೀನಾರಾಯಣ ಶರ್ಮ, ಬಿ. ಶಿವಪ್ರಸಾದ್, ಸಂಧ್ಯಾಪ್ರಭು, ಶರ್ಮಿಳಾ, ಪ್ರಕಾಶ ಶೆಟ್ಟಿ, ಕೇಂದ್ರ ಬ್ಯಾಂಕಿನ ಪ್ರತಿನಿಧಿ ಹೆಚ್. ಕೇಶವ ಶೆಣೈ ಉಪಸ್ಥಿತರಿದ್ದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಅವರು ಸ್ವಾಗತಿಸಿ ವರದಿ ವಾಚಿಸಿದರು.

By suddi9

Leave a Reply

Your email address will not be published. Required fields are marked *