ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಉಜಿರೆ ಕಡೆಯಿಂದ ಬಸ್ಸಿನಲ್ಲಿ ಬಂದಿದ್ದ ವಿಭಿನ್ನ ಕೋಮಿನ ಜೋಡಿಯನ್ನು ಸ್ಥಳೀಯರು ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಖಾಸಗಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ಸೈಯದ್ ಸಲ್ಮಾನ್ ಮತ್ತು ಮಂಗಳೂರು ಖಾಸಗಿ ಪದವಿಪೂರ್ವ ಕಾಲೇಜಿನ ಹಿಂದೂ ವಿದ್ಯಾರ್ಥಿನಿ ಬಿ.ಸಿ.ರೋಡ್‍ನಲ್ಲಿ ಒಟ್ಟಿಗೆ ಪತ್ತೆಯಾಗಿದ್ದಾರೆ.
ಮೂಲತಃ ಇವರಿಬ್ಬರು ಕೂಡಾ ಮೂಡಿಗೆರೆ ತಾಲ್ಲೂಕಿನವರೇ ಆಗಿದ್ದು, ಪ್ರೌಢಶಾಲೆಯಲ್ಲಿ ಒಟ್ಟಿಗೆ ಓದಿದ್ದರು ಎನ್ನಲಾಗಿದೆ. ಕಳೆದ ಶನಿವಾರ ಊರಿಗೆ ತೆರಳಿದ್ದ ವಿದ್ಯಾರ್ಥಿನಿ ಬುಧವಾರ ಮೂಡಿಗೆರೆಯಿಂದ ಸಲ್ಮಾನ್ ಜೊತೆಗೆ ವ್ಯಾನ್ ಮೂಲಕ ಉಜಿರೆಗೆ ಬಂದು ಬಳಿಕ ಖಾಸಗಿ ಬಸ್ಸಿನಲ್ಲಿ ಬಿ.ಸಿ.ರೋಡ್‍ಗೆ ಬಂದಿದ್ದಾರೆ. ಇದನ್ನು ಕೆಲವೊಂದು ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಗುರುತಿಸಿ ‘ಲವ್ ಜಿಹಾದ್’ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ತಕ್ಷಣವೇ ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ ನೇತೃತ್ವದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇವರಿಬ್ಬರೂ ಮಂಗಳೂರಿನ ಖಾಸಗಿ ಕಾಲೇಜಿನಿಂದ ಸರ್ಟಿಫಿಕೇಟ್ ತರಲು ಹೋಗುತ್ತಿದ್ದು, ಇವರ ಹೆತ್ತವರನ್ನು ಕರೆಸಿ ಎಚ್ಚರಿಕೆ ನೀಡಿ ಅವರೊಂದಿಗೆ ಕಳುಹಿಸಲಾಗಿದೆ ಎಂದು ನಗರ ಠಾಣಾಧಿಕಾರಿ ನಂದ ಕುಮಾರ್ ತಿಳಿಸಿದ್ದಾರೆ.