ಮೂಡುಬಿದಿರೆ: ಇಲ್ಲಿನ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜು ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮವಾದ ದೈಹಿಕ ಶಿಕ್ಷಣ, ಕ್ರೀಡಾ ತರಬೇತಿ ನೀಡಿ ನಿರಂತರವಾಗಿ ಶೇ.100ರ ಫಲಿತಾಂಶವನ್ನು ಕಾಯ್ದುಕೊಳ್ಳುತ್ತಾ ರಾಜ್ಯದಲ್ಲೇ ಅತ್ಯುತ್ತಮ ದೈಹಿಕ ಶಿಕ್ಷಣ ಸಂಸ್ಥೆಯಾಗಿ ಮೂಡಿಬಂದಿದೆ ಎಂದು ಶ್ರೀ ಮಹಾವೀರ ಕಾಲೇಜು ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಹೇಳಿದರು.

ಅವರು ಇತ್ತೀಚಿಗೆ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಉತ್ತಮ ತರಬೇತಿ ಸೌಲಭ್ಯದ ಸಂಪೂರ್ಣ ಪ್ರಯೋಜನ ಪಡೆದು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ಹಾರೈಸಿದರು.
ಕರ್ನಾಟಕ ಸರ್ಕಾರದ ಮಾಜಿ ಕ್ರೀಡಾ ಸಚಿವ, ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ತೀರ್ಥರೂಪರು ಹಾಗೂ ರಾಷ್ಟ್ರೀಯ ಕ್ರೀಡಾಪಟುವಾದ ದಿ.ಎಂ.ಕೆ. ಅನಂತರಾಜ್ರವರು ಅಂದಿನ ದಿನಗಳಲ್ಲಿ ಮಾಡಿದ ಕ್ರೀಡಾಸಾಧನೆಯನ್ನು ವಿವರಿಸುತ್ತಾ, ಸಂಸ್ಥೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯ, ತರಬೇತಿಯನ್ನು ಪರಿಣಾಮಕಾರಿಯಾಗಿ ಬೆಳೆಸಿಕೊಂಡು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡುವುದರೊಂದಿಗೆ ಯುವ ಪೀಳಿಗೆಯನ್ನು ಕ್ರೀಡಾ ಕ್ಷೇತ್ರದಲ್ಲಿ ತರಬೇತುಗೊಳಿಸುವ ಅತ್ಯುತ್ತಮ ದೈಹಿಕ ಶಿಕ್ಷಕರಾಗಿ ಹೊರಹೊಮ್ಮುವಂತೆ ಕರೆ ನೀಡಿದರು. ನೂತನ ಸಾಲಿನ ವಿದ್ಯಾರ್ಥಿಗಳಿಗೆ, ಸಂಘದ ಪದಾಧಿಕಾರಿಗಳಿಗೆ ಅವರು ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲ ಧನಂಜಯ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ರಾಜ್ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಕೇವನ್ ವಂದಿಸಿದರು. ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ್ ಭಟ್, ಎ.ಜಿ.ಸೋನ್ಸ್ ಐಟಿಐ ಪ್ರಾಚಾರ್ಯ ಜಯರಾಮ ಶೆಟ್ಟಿಗಾರ್, ಶ್ರೀಮಹಾವೀರ ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ವಾಮನ ಬಾಳಿಗಾ, ಕಾಲೇಜಿನ ವಿದ್ಯಾರ್ಥಿ ನಾಯಕ ದೀಕ್ಷಿತ್ ಉಪಸ್ಥಿತರಿದ್ದರು.