ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರ ಸಹಿತ ನಾಲ್ವರ ವಿರುದ್ಧ ಪೊಲೀಸರಿಗೆ ಜಾತಿನಿಂದನೆ ದೂರು ನೀಡುವ ಮೂಲಕ ಪಂಚಾಯಿತಿನ ಪಿಡಿಒ ವೆಂಕಟೇಶ್ ಎಂಬವರು ಬ್ಲ್ಯಾಕ್‍ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಉದ್ಯೋಗ ಖಾತರಿ ಯೋಜನೆ ಬಗ್ಗೆ ಶನಿವಾರ ನಡೆದ ವಿಶೇಷ ಗ್ರಾಮಸಭೆಯನ್ನು ಇವರು ಬಹಿಷ್ಕರಿಸಿದ ಘಟನೆ ನಡೆದಿದೆ.

27-Rayee Pnchyt
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಾವತಿ, ಸದಸ್ಯರಾದ ಹರೀಶ ಆಚಾರ್ಯ, ರಾಘವ ಅಮೀನ್, ಪದ್ಮನಾಭ ಗೌಡ, ನಿರುಪಮಾ ಎಸ್.ಭಂಡಾರಿ, ಕುಸುಮಾ, ಯಶೋಧ ಇವರು ಶನಿವಾರ ಗೈರು ಹಾಜರಾಗುವ ಮೂಲಕ ವಿಶೇಷ ಗ್ರಾಮಸಭೆ ಬಹಿಷ್ಕರಿಸಿ ಗಮನ ಸೆಳೆದರು.
ಈಚೆಗಷ್ಟೇ ಇಲ್ಲಿನ ಕೊಯಿಲ ಬಸ್‍ನಿಲ್ದಾಣದಲ್ಲಿರುವ ಅಂಗಡಿಯೊಂದನ್ನು ಏಲಂ ಮೂಲಕ ಪಡೆದುಕೊಂಡಿದ್ದ ಸ್ಥಳೀಯ ನಿವಾಸಿ ಸವಿನ್ ಕುಮಾರ್ ಜೈನ್ ಎಂಬವರ ಕರಾರು ಪತ್ರದಲ್ಲಿ ಪಿಡಿಒ ಹೆಚ್ಚುವರಿ ನಿಯಮಾವಳಿ ಸೇರ್ಪಡೆಗೊಳಿಸಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಅಂಗಡಿ ಮಾಲೀಕ ಸವಿನ್ ಕುಮಾರ್ ಜೈನ್, ರಮಾನಾಥ ರಾಯಿ ಇವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಿಸುವ ಮೂಲಕ ಪಿಡಿಒ ವೆಂಕಟೇಶ್ ಅವರು ಸರ್ಕಾರಿ ಅಧಿಕಾರಿ ಎಂಬುದನ್ನೂ ಮರೆತು ಕರ್ತವ್ಯ ಲೋಪ ಮರೆಮಾಚಲು ಜಾತಿ ಅಸ್ತ್ರ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇವರಿಗೆ ವರ್ಗಾವಣೆ ಆದೇಶ ಬಂದಿದ್ದರೂ ಇವರನ್ನು ತೆರವುಗೊಳಿಸಿಲ್ಲ. ಪ್ರತಿಯೊಂದಕ್ಕೂ ಜಾತಿ ಅಸ್ತ್ರ ಬಳಸುವ ಈ ಪಿಡಿಒ ವರ್ಗಾವಣೆಗೊಳ್ಳುವವರೆಗೆ ಯಾವುದೇ ಗ್ರಾಮಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಆರೋಪ:
ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಬಂದಿರುವ ಪಿಡಿಒ ವೆಂಕಟೇಶ್ ಅವರು ಇಲ್ಲಿನ ಅಭಿವೃದ್ಧಿ ವಿಚಾರದಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ್ದು, ಆಡಳಿತಾರೂಢ ಸದಸ್ಯರೊಂದಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಹಿತ ಆಡಳಿತಾರೂಢ ಸದಸ್ಯರು ಮತ್ತು ನಾಗರಿಕರೊಂದಿಗೆ ಅಗೌರವ ಮತ್ತು ದರ್ಪದಿಂದ ವರ್ತಿಸುತ್ತಿದ್ದಾರೆ. ಈ ಹಿಂದೆ ಕೈತ್ರೋಡಿ ಪರಿಸರದಲ್ಲಿ ಕುಡಿಯುವ ನೀರಿನ ಬಿಲ್ಲು ಪಾವತಿಸಿಲ್ಲ ಎಂಬ ನೆಪವೊಡ್ಡಿ ಅಲ್ಲಿನ ಪಂಪ್‍ಹೌಸ್‍ಗೆ ಏಕಾಯೇಕಿ ಬೀಗ ಜಡಿದ ಪರಿಣಾಮ ಸ್ಥಳೀಯರು ಪಂಚಾಯಿತಿಗೆ ಮುತ್ತಿಗೆ ಹಾಕಿದ್ದಾರೆ. ಈಗಾಗಲೇ ಪಂಚಾಯಿತಿನ ಕೆಲವೊಂದು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು ಒಂದು ವರ್ಷದ ವೇತನ ಬಡ್ತಿ ಕಡಿತಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆದೇಶಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *