ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ಜನರ ನಡುವೆ ಪರಸ್ಪರ ದ್ವೇಷ ಮತ್ತು ಅಸೂಯೆ ಮತ್ತಿತರ ಸ್ವಾರ್ಥ ಮನೋಭಾವ ತೊಲಗಿಸಲು ಅಸಾಧ್ಯವಾಗಿರುವ ವಿಜ್ಞಾನ ಜಗತ್ತಿಗೆ ಪರ್ಯಾಯವಾಗಿ ಶಾಂತಿ ಸಂದೇಶ ಮೂಲಕ ದೂರದೃಷ್ಟಿಯ ಚಿಂತನೆ ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ಶಾಂತಿಯುತ ಹೋರಾಟದ ಬದುಕು ಮತ್ತು ತತ್ವಾದರ್ಶಗಳು ಪಠ್ಯ ಸೇರ್ಪಡೆಗೊಂಡು ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಸಿಗಬೇಕು ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ. ಸಿ. ರೋಡ್ ಸಮೀಪದ ಗಾಣದಪಡ್ಪು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುವರ್ಯರ 162ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಯನ್ನು ಮನೆಯೊಳಗಿಟ್ಟು ಹೊರಗೆ ಎಲ್ಲರೂ ಒಟ್ಟಾಗಿ ಭಾರತೀಯರಾಗುವ ಪ್ರಯತ್ನ ನಡೆಸಬೇಕು. ಆ ಮೂಲಕ ಸ್ವಾಮಿ ವಿವೇಕಾನಂದ ಮತ್ತು ಬ್ರಹ್ಮಶ್ರೀ ನಾರಾಯಣಗುರು ನಮಗೆ ಆದರ್ಶವಾಗಬೇಕು. ಇದಕ್ಕಾಗಿ ನಾವು ಮಕ್ಕಳಿಗೆ ಸಾಲ ಮಾಡಿ ಅದ್ದೂರಿ ಮೆಹಂದಿ ಮತ್ತು ಮದುವೆ ಮಾಡುವ ಬದಲಾಗಿ ಸಾಲ ಮಾಡಿ ಅವರಿಗೆ ಎಲ್ಲಾ ಭಾಷೆ ಕಲಿಸುವ ಉನ್ನತ ಮಟ್ಟದ ಶಿಕ್ಷಣ ನೀಡಿ ಶ್ರೇಷ್ಟ ಬದುಕು ರೂಪಿಸಲು ನೆರವಾಗಬೇಕು ಎಂದು ಅವರು ಸಲಹೆ ನೀಡಿದರು.

‘ಶ್ರೀರಾಮ ಹುಟ್ಟಿದಂತೆ ರಾವಣ, ಧರ್ಮರಾಯ ಹುಟ್ಟಿದಂತೆ ಕೌರವ, ಮಹಮ್ಮದ್ ಪೈಗಂಬರ ಹುಟ್ಟಿದಂತೆ ಮಹಮ್ಮದ್ ಬಿನ್ ಲಾದೆನ್ ಜನಿಸಿದ್ದರಿಂದ ಇವರ ನಡುವಿನ ವ್ಯತ್ಯಾಸದ ಜೊತೆಗೆ ಒಳಿತು – ಕೆಡುಕು ಹಾಗೂ ಶ್ರೇಷ್ಠತೆ ಬಗ್ಗೆ ಸಮಾಜಕ್ಕೆ ಅರಿತುಕೊಳ್ಳಲು ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ಎಲ್ಲಾ ಎಡರು- ತೊಡರುಗಳನ್ನು ಮೆಟ್ಟಿ ನಿಲ್ಲಲು ಬಂಟ್ವಾಳ ಬಿಲ್ಲವ ಸಂಘವು ಸುವರ್ಣ ಮಹೋತ್ಸವ ಪ್ರಯುಕ್ತ ಶೀಘ್ರವೇ ಬೃಹತ್ ಸಮಾವೇಶ ನಡೆಸುವ ಮೂಲಕ ಸಂಘಟನೆ ಬಲಪಡಿಸಲಾಗುವುದು ಎಂದರು.’

ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆ ವಿರೋಧಪಕ್ಷ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಜಾತಿ, ಧರ್ಮ ಮತ್ತು ಭಾಷೆ, ಪಂಥಕ್ಕಿಂತ ಮಿಗಿಲಾದುದು ರಾಷ್ಟ್ರೀಯತೆ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ಬಲಿಷ್ಟ ರಾಷ್ಟ್ರಕಟ್ಟುವ ಕೈಂಕರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು 30 ಮಂದಿ ವಿದ್ಯಾಥರ್ಿಗಳನ್ನು ದತ್ತು ಸ್ವೀಕರಿಸಿರುವುದನ್ನು ಘೋಷಿಸಿದರು. ಸಂಘದ ಉಪಾಧ್ಯಕ್ಷ ರಾಘವ ಅಮೀನ್ ಮರಕಡಬೈಲು, ಜೊತೆ ಕಾರ್ಯದರ್ಶಿ ಶಂಕರ ಕಾಯರ್ಮಾರ್, ಲೆಕ್ಕಪರಿಶೋಧಕ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಮಹಿಳಾ ಘಟಕ ಅಧ್ಯಕ್ಷೆ ಭಾರತಿ ಬೇಬಿ ಕುಂದರ್ ಮತ್ತಿತರರು ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಸ್ವಾಗತಿಸಿ, ಕೋಶಾಧಿಕಾರಿ ಮಹಾಬಲ ಬಂಗೇರ ವಂದಿಸಿದರು. ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.