ಮಂಗಳೂರು: ರಸ್ತೆಯ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಕಂಬದಲ್ಲಿನ ತಂತಿಯೊಂದು ಸ್ಪರ್ಶಗೊಂಡ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಹರೇಕಳ ಸಮೀಪದ ಪಾವೂರಿನಲ್ಲಿ ನಡೆದಿದೆ.
ಇಲ್ಲಿನ ಪಾವೂರು ನಿವಾಸಿ ಅಬ್ದುಲ್ ಹಮೀದ್ ಹಾಗೂ ಸಾಹಿರಾ ದಂಪತಿಯ 7 ರ ಹರೆಯದ ಪುತ್ರ ಮುಹಮ್ಮದ್ ರಿಝ್ವಾನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಬಾಲಕ.
ಈತ ಇಂದು ಬೆಳಗ್ಗೆ ಹಾಲು ತರಲೆಂದು ಹೋದ ವೇಳೆ ಮನೆಯ ಸಮೀಪದ ವಿದ್ಯುತ್ ಕಂಬವೊಂದರಿಂದ ತುಂಡಾಗಿ ಬಿದ್ದಿದ್ದ ತಂತಿಯನ್ನು ಗಮನಿಸದೆ ತುಳಿದಿದ್ದರಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಮೃತ ಬಾಲಕ ಹರೇಕಳದ ರಾಮಕೃಷ್ಣ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ವಿದ್ಯುತ್ ತಂತಿಯನ್ನು ಗಮನಿಸದೆ ಅದನ್ನು ತುಳಿದ ಪರಿಣಾಮ ಈತ ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದುಬಂದಿದೆ.
ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
