ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಾರಣಿಕ ಪ್ರಸಿದ್ಧ ಕಲ್ಲುರ್ಟಿ ದೈವಸ್ಥಾನ ಬಳಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಜನತೆಗೆ ಸುರಕ್ಷತೆಯಿಂದ ರಸ್ತೆ ದಾಟಲು ಅನುಕೂಲವಾಗುವಂತೆ ಅಂಡರ್ಪಾಸ್ ನಿರ್ಮಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸದಸ್ಯ ಉಮೇಶ ಬೋಳಂತೂರು ಅವರು ವಿಷಯ ಪ್ರಸ್ತಾಪಿಸಿದರು. ಈ ಪ್ರದೇಶದಲ್ಲಿ ಈಗಾಗಲೇ ಹಲವು ಬಾರಿ ಅಪಘಾತ ಸಂಭವಿಸಿರುವ ಬಗ್ಗೆ ಗ್ರಾಮಸ್ಥರಿಂದ ಮನವಿ ಸಲ್ಲಿಕೆಯಾಗಿದ್ದು, ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.
ತಾಲ್ಲೂಕಿನಲ್ಲಿ ಅಕ್ರಮ -ಸಕ್ರಮ ಯೋಜನೆಯಡಿ ಸಾವಿರಾರು ಎಕರೆ ಜಮೀನು ಕಬಳಿಸಲಾಗಿದ್ದು, ಇದರಲ್ಲಿ ಅಧಿಕಾರಿಗಳಿಂದಲೇ ಫೋರ್ಜರಿ ಸಹಿ ಮತ್ತು ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಸದಸ್ಯ ರಾಜೇಶ ಬಾಳೆಕಲ್ಲು ಆಗ್ರಹಿಸಿದರು. ಇನ್ನೊಂದೆಡೆ ತಾಲ್ಲೂಕಿನಲ್ಲಿ ಗರಿಷ್ಟ ಮೊತ್ತದ ವಿದ್ಯುತ್ ಬಿಲ್ಲು ಪಾವತಿ ನೆಪದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮಂದಿ ಬಿಪಿಎಲ್ ಪಡಿತರ ಚೀಟಿ ಕಳೆದುಕೊಂಡಿದ್ದು, ಈ ಬಗ್ಗೆ ಮಾನದಂಡ ಬದಲಾಯಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ರೈ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಮಲೇರಿಯಾ ಮತ್ತು ಡೆಂಗೆ ಪ್ರಕರಣ ಹತೊಟಿಗೆ ಬಂದಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು 413 ಶಂಕಿತ ಡೆಂಗೆ ಪ್ರಕರಣ ಪತ್ತೆಯಾಗಿ ಈ ಪೈಕಿ 81 ಪ್ರಕರಣ ಮಾತ್ರ ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದರು. ತಾಲ್ಲೂಕು ಕೇಂದ್ರದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ಜಮೀನು ಕಾಯ್ದಿರಿಸುವುದರ ಜೊತೆಗೆ ಅಂಗನವಾಡಿ ಕೇಂದ್ರಗಳ ಪಹಣಿಪತ್ರ ಸರಿಪಡಿಸಬೇಕು. ಸಜಿಪನಡು ಗ್ರಾಮದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಪುರಸಭೆ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಅವರಿಗೆ ಸಚಿವರು ಸೂಚಿಸಿದರು.
ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ. ಇದರಿಂದಾಗಿ ಆಹಾರ ಧಾನ್ಯ ಮತ್ತು ಬೇಳೆ ಕಾಳುಗಳನ್ನು ಮಕ್ಕಳ ಬದಲಾಗಿ ಜಾನುವಾರುಗಳಿಗೆ ನೀಡುವಂತಾಗಿದೆ ಎಂದು ಸದಸ್ಯ ಉಮೇಶ ಬೋಳಂತೂರು ಆರೋಪಿಸಿದಾಗ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಧ್ವನಿಗೂಡಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಕಮಲಾಕ್ಷಿ ಪೂಜಾರಿ, ಕೆಡಿಪಿ ಸದಸ್ಯ ಹೈದರ್, ತಹಶೀಲ್ದಾರ್ ಪುರಂದರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಮತ್ತಿತರರು ಇದ್ದರು.
