ಬಂಟ್ವಾಳ: ಪುರಸಭಾ ಸದಸ್ಯರಿಬ್ಬರು ರಸ್ತೆ ದುರಸ್ಥಿಗೆ ಆಗ್ರಹಿಸಿ ಬಾನುವಾರ ಬಂಟ್ವಾಳಕ್ಕೆ ಆಗಮಿಸುವ ಮುಖ್ಯಮಂತ್ರಿಯವರ ಕಾರು ಬರುವ ಹಾದಿಯಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯಿಂದ ಕೊನೆಗೂ ಎಚ್ಚೆತ್ತುಕೊಂಡ ಹೆದ್ದಾರಿ ಇಲಾಖೆ ಬಂಟ್ವಾಳ-ವಿಲ್ಲಪುರಂ ಹೆದ್ದಾರಿಯ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯಲ್ಲಿ ಬೃಹದಾಕರದ ಹೊಂಡವನ್ನು ರಾತ್ರೋರಾತ್ರಿ ತಾತ್ಕಾಲಿಕವಾಗಿ ತೇಪೆ ಹಚ್ಚುವ ಕಾರ್ಯ ನಡೆಸಿದ್ದಾರೆ.
ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್, ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಹಾಗೂ ಎಸ್ಸೈ ನಂದಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಖಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಮಧ್ಯ ರಾತ್ರಿ ಹೆದ್ದಾರಿ ಇಲಾಖೆಯಿಂದ ಹೊಂಡ ಮುಚ್ಚುವ ಕಾರ್ಯ ನಡೆದಿದೆ.

ಬಂಟ್ವಾಳ-ವಿಲ್ಲಪುರಂ ಹೆದ್ದಾರಿಯ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯಲ್ಲಿ ಬೃಹದಾಕರದ ಹೊಂಡ ಬಿದ್ದಿದ್ದು ಪರಿಣಾಮ ರಸ್ತೆಯು ತಗ್ಗಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಗಾಗಲೇ ವೇಗವಾಗಿ ಬರುವ ವಾಹನಗಳು ಇಲ್ಲಿ ಹಠಾತನೆ ಬ್ರೇಕ್ ಹಾಕುವುದರಿಂದ ಮತ್ತು ಈ ಹೊಂಡವನ್ನು ತಪ್ಪಿಸುವ ಭರದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ದುರಸ್ಥಿಗೆ ಹೆದ್ದಾರಿ ಇಲಾಖೆಗೆ ಮನವಿ ನೀಡಿದ್ದಲ್ಲದೆ ದೂರವಾಣಿ ಮೂಲಕವೂ ಹಲವು ಬಾರಿ ಒತ್ತಾಯಿಸಿದರೂ ಇಲಾಖಾಧಿಕಾರಿಗಳು ಕನಿಷ್ಠ ಸ್ಪಂದನವನ್ನು ನೀಡದೆ ಉಡಾಫೆಯ ಉತ್ತರವನ್ನಷ್ಟೇ ನೀಡುತ್ತಿದ್ದಾರೆ ಎಂದು ಆರೋಪಿಸಿ ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಸದಸ್ಯ ಗೋವಿಂದ ಪ್ರಭು ಅವರೊಂದಿಗೆ ಜೊತೆಗೂಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

ಎಸ್ಪಿ ತರಾಟೆ: ಪುರಸಭಾ ಸದಸ್ಯರಿಬ್ಬರು ಸಿಎಂ ಆಗಮನದ ವೇಳೆ ರಸ್ತೆಯಲ್ಲಿ ಧರಣಿ ಕುಳಿತುಕೊಳ್ಳುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೋರಸೆ ಅವರು ಬಾನುವಾರ ಬೆಳಗ್ಗೆ ಬಂಟ್ವಾಳ ನಗರ ಠಾಣೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಕೇಶವ ಮೂರ್ತಿ ಎಂಬವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ದೇವದಾಸ ಶೆಟ್ಟಿ ಅವರನ್ನು ಠಾಣೆಗೆ ಕರೆಸಲಾಗಿತ್ತು. ನವೆಂಬರ್ ಅಂತ್ಯದೊಳಗೆ ರಸ್ತೆಗೆ ಡಾಂಬರೀಕರಣಗೊಳಿಸಿ ಸುಸ್ಥಿತಿಗೆ ತರಲಾಗುವುದು ಎಂದು ರಾ.ಹೆ. ಅಧಿಕಾರಿ ಭರವಸೆ ನೀಡಿದರಾದರೂ ಇದಕ್ಕೆ ಎಸ್ಪಿ ಭೂಷಣ್ ಹಾಗೂ ದೇವದಾಸ ಶೆಟ್ಟಿ ಒಪ್ಪಲಿಲ್ಲ. ಈ ಸಮಸ್ಯೆ ನೈಜ್ಯವಾಗಿರುವುದರಿಂದ ಮುಂದಿನ 15 ದಿನಗಳ ಒಳಗಾಗಿ ಈ ರಸ್ತೆಯನ್ನು ಸುಸ್ಥಿತಿಗೆ ತರಬೇಕು. ಅಕ್ಟೋಬರ್ 19ರಂದು ಖುದ್ದು ತಾನೆ ರಸ್ತೆಯ ಸ್ಥಿತಿಯನ್ನು ಪರಿಶೀಲಿಸುದಾಗಿ ಎಸ್ಪಿ ಭೂಷಣ್ ಕೇಶವ ಮೂರ್ತಿಯವರಿಗೆ ತಿಳಿಸಿದರು. ಇದಕ್ಕೆ ಹೆದ್ದಾರಿ ಇಲಾಖಾಧಿಕಾರಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ದೇವದಾಸ ಶೆಟ್ಟಿ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ಸಮ್ಮತಿಸಿದರು.
