ಬಂಟ್ವಾಳ: ವಿದ್ಯಾರ್ಥಿಗಳು ಬಾಲ್ಯದಲ್ಲಿ ಕೇವಲ ಶಿಕ್ಷಣ ಮತ್ತು ಅಂಕ ಗಳಿಕೆಗೆ ಸೀಮಿತವಾಗಿರದೆ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಮತ್ತಿತರ ಮಾನವೀಯ ಮೌಲ್ಯ ಮತ್ತು ನಾಯಕತ್ವ ಗುಣ ಪ್ರೇರೇಪಿಸುವ ಸಾಮಾಜಿಕ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಮತ್ತು ಮಂಗಳೂರು ರೆಡ್‍ಕ್ರಾಸ್ ಸಂಸ್ಥೆ ಹಾಗೂ ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಕಾಲೇಜಿನಲ್ಲಿ ರಕ್ತದಾನಿಗಳಿಗೆ ಶುಕ್ರವಾರ ರಕ್ತದಾನ ಕಾರ್ಡು ವಿತರಿಸಿ ಅವರು ಮಾತನಾಡಿದರು.

ಇಂತಹ ಸಮಾಜಮುಖಿ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಅವರಲ್ಲಿ ಹೆತ್ತವರು ಮತ್ತು ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆದು ವಿನಯಶೀಲತೆ ಮತ್ತು ಸಾಧನಾಶೀಲ ಮನೋಭಾವ ಮೂಲಕ ಭವಿಷ್ಯದಲ್ಲಿ ಸಾಮಾಜಿಕವಾಗಿ ಎದುರಾಗುವ ಎಲ್ಲಾ ಅಡೆ ತಡೆಗಳನ್ನು ಸಮರ್ಥವಾಗಿ ನಿಭಾಯಿಸಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕಾ ಮಾಹಿತಿ:
ಇದೇ ವೇಳೆ ಬಂಟ್ವಾಳ ಕಸಾಪ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅವರು ವಿದ್ಯಾರ್ಥಿಗಳಿಗೆ ಪತ್ರಿಕಾ ಮಾಹಿತಿ ನೀಡಿದರು. ಪ್ರಸಕ್ತ ಸ್ಪರ್ಧಾತ್ಮಕ ಸಮಾಜದಲ್ಲಿ ಮುದ್ರಣ ಮತ್ತು ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ಕ್ರಿಯಾಶೀಲ ಪತ್ರಕರ್ತರಾಗಲು ವಿಪುಲ ಅವಕಾಶಗಳಿದ್ದು, ಇದಕ್ಕಾಗಿ ಪ್ರತ್ಯೇಕ ಡಿಪ್ಲೋಮ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಲಭಿಸುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ ಭಟ್ ಅಜೆಕ್ಕಳ ಶುಭ ಹಾರೈಸಿದರು. ರೆಡ್‍ಕ್ರಾಸ್ ಸಂಸ್ಥೆ ಪ್ರತಿನಿಧಿ ಪದ್ಮನಾಭ ಬಿ., ಪತ್ರಿಕಾ ಛಾಯಾಗ್ರಾಹಕ ಸತೀಶ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಹೈದರ್ ಆಲಿ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
