ಬಂಟ್ವಾಳ: ಪಕ್ಷ ನೀಡಿದ ಜವಾಬ್ದಾರಿಯ ಜೊತೆ ಸಂಘನಾತ್ಮಕವಾಗಿ ನಮ್ಮ ಗ್ರಾಮಗಳಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳು ಆಗಬೇಕಾಗಿದೆ ಎನ್ನುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡಾಗ ಮಾತ್ರ ಸಭೆಗೆ ಪ್ರಾಶಸ್ತ್ಯ ಬರುತ್ತದೆ ಎಂದು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆಯನ್ನು ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಸಭೆಯಲ್ಲಿ ನಡೆಸಿದ ಚರ್ಚೆಯ ವಿಷಯಗಳು ಯಾವ ಹಂತಕ್ಕೆ ತಲುಪಿದೆ ಎಂಬ ಬಗ್ಗೆ ಮತ್ತೆ ವಿಮರ್ಶೆ ಮಾಡಿಕೊಂಡು ಮುಂದಿನ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದರು. ಬಿ.ಜೆ.ಪಿ ಪಕ್ಷ ಎಲ್ಲಾ ಕಾರ್ಯಕರ್ತರಿಗೆ ಕೆಲಸ ಮಾಡಲಿಕ್ಕೆ ಸ್ಥಾನ ಮಾನ ನೀಡಿದೆ, ಜವಬ್ದಾರಿಯನ್ನು ಅರಿತುಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಬಂಟ್ವಾಳ ಬೆಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಚಂದ್ರಹಾಸ ಉಳ್ಳಾಲ, ಸುಲೋಚನಾ ಜಿಕೆ.ಭಟ್, ರಾಮ್ದಾಸ ಬಂಟ್ವಾಳ, ಸುಗುಣ ಕಿಣಿ, ಮೋನಪ್ಪ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು. ದೇವಪ್ಪ ಪೂಜಾರಿ ಸ್ವಾಗತಿಸಿ, ವೆಂಕಟೇಶ್ ನಾವುಡ ವಂದಿಸಿದರು. ಸೀಮಾಮಾದವ ಕಾರ್ಯಕ್ರಮ ನಿರೂಪಿಸಿದರು.