ಮೂಡುಬಿದ್ರೆ: ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿಯ ಬಗ್ಗೆ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ಈ ಕಲೆಯಿಂದ ಜನಸಾಮಾನ್ಯರಿಗೆ ಧರ್ಮದ ಅರಿವು ಮತ್ತು ಸಂಸ್ಕಾರ ಲಭಿಸಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

22mdbkalotsava11

ಬೆಳುವಾಯಿಯ ಯಕ್ಷದೇವ ಮಿತ್ರ ಕಲಾಮಂಡಳಿಯು ಇಲ್ಲಿನ ಸಮಾಜಮಂದಿರದಲ್ಲಿ ಭಾನುವಾರ ಏರ್ಪಡಿಸಿದ ವಿಂಶತಿ ಕಲೋತ್ಸವಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಯಕ್ಷಗಾನವು ಸಾಮರಸ್ಯವನ್ನು ಬಿತ್ತಿದೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದಕ್ಕಿದೆ.

ಕಲಾವಿದರು ಮತ್ತು ಸಂಘಟಕರ ಪರಿಶ್ರಮದಿಂದಾಗಿ ಈ ಕಲೆಯು ಜಗದಗಲ ಪಸರಿಸಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ ಸಮಾಜದಲ್ಲಿ ಭಾವೈಕ್ಯತೆಯನ್ನು ಬೆಳೆಸಲು ಯಕ್ಷಗಾನದಂತಹ ಕಲೆಗಳು ಸಹಕಾರಿಯಾಗುತ್ತವೆ. ಇದರಿಂದಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಐದು ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ ವಿಂಶತಿ ಕಲೋತ್ಸವವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಸಂಘದ 20 ವರ್ಷಗಳ ಚಟುವಟಿಕೆಗಳನ್ನು ದಾಖಲಿಸಿದ `ಶ್ರೀ ಯಕ್ಷದೇವ 20‘ ಸ್ಮರಣ ಸಂಚಿಕೆಯನ್ನು ಯಕ್ಷಗಾನ ವಿಮರ್ಶಕ ಎ. ಈಶ್ವರಯ್ಯ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿ ಡಾ| ಜೀವಂಧರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಎಂಟು ಮಂದಿ ಯಕ್ಷಗುರುಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಮಾನ ನಿಲ್ದಾಣದ ನಿಕಟಪೂರ್ವ ನಿರ್ದೇಶಕ ಎಂ.ಆರ್.ವಾಸುದೇವ, ತುಳುಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಪೂನಾದ ಉದ್ಯಮಿ ಉದಯಶೆಟ್ಟಿ ಭಾಗವಹಿಸಿದರು. ಸಮಿತಿಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಾನಂದ ಭಟ್ ಸ್ವಾಗತಿಸಿದರು. ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *