ಬಂಟ್ವಾಳ : ತುಂಬೆ ಡ್ಯಾಂಗೆ ಸಂಬಂದಿಸಿದಂತೆ ನೀರು ನಿಲ್ಲಿಸುವ ಪ್ರಕ್ರಿಯೆಗೆ ಮುಂಚಿತವಾಗಿ ಡಿ.1ರಂದು ಬಂಟ್ವಾಳ ತಾಲೂಕು ಕಛೇರಿ ಕಟ್ಟಡದಲ್ಲಿ ಎ.ಸಿ.ರೇಣುಕಾ ಪ್ರಸಾದ್,ತಹಶೀಲ್ದಾರ್ ಪುರಂದರ ಹೆಗ್ಡೆ,ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹಾಗೂ 5 ಗ್ರಾಮಗಳ ಬೆರಳೆಣಿಕೆಯ ಸಂತ್ರಸ್ತರ ಸಮಕ್ಷಮದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಹಾಗೂ ಇತರ ಕಂದಾಯ ಅಧಿಕಾರಿಗಳ ಜೊತೆಯಲ್ಲಿ ರೈತರನ್ನು ಕರೆಯದೆ ಗುಟ್ಟಾಗಿ ಸಭೆ ನಡೆಸಿರುವುದು ರೈತರಿಗೆ ಮಾಡಿರುವ ಬಹು ದೊಡ್ಡ ಅನ್ಯಾಯ ಮತ್ತು ಅವಮಾನ ಇದರ ವಿರುದ್ದ ನಾವು ಹೋರಾಟಕ್ಕಿಳಿಯಲು ಸಿದ್ದರಾಗಿದ್ದೇವೆ ಎಂದು ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ಬಾರಿ ಈ ಭಾಗದ ರೈತರು ಉನ್ನತ ಮಟ್ಟದ ಅಧಿಕಾರಿಗಳ ಬೇಟಿ ಮಾಡಿ ಸಮಸ್ಯೆಯ ಬಗ್ಗೆ ಮನವಿ ಮಾಡಿಕೊಂಡರೂ ರೈತರಿಗೆ ಕಿಂಚಿತ್ತು ಬೆಲೆ ಕೊಡದೆ ಸರ್ವೇ ಕಾರ್ಯವನ್ನು ಮುಗಿಸಿ ಇದೀಗ ರೈತರಿಗೆ ಪರಿಹಾರ ನೀಡದೆ ನೀರು ನಿಲ್ಲಿಸಲು ಹೊರಟಿರುವುದು ರೈತರ ಮಾರಣ ಹೋಮ ಮಾಡಲು ಜಿಲ್ಲಾಡಳಿತ ಮತ್ತು ಸರಕಾರ ಮುಂದಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಮುಖ್ಯ ಮಂತ್ರಿಯ ಬಳಿಯಲ್ಲಿ ಈ ಬಗ್ಗೆ ಕೇಳಿದಾಗಲೂ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುವ ಸಮಜಾಯಿಸಿಕೆಯ ಉತ್ತರವನ್ನು ನೀಡಿರುವುದು ರೈತರನ್ನು ಇನ್ನಷ್ಟು ಕೆರಳಿಸುವಂತೆ ಮಾಡಿದೆ.
ಮಂಗಳೂರು ಮಹಾ ನಗರ ಪಾಲಿಕೆಗೆ ಕುಡಿಯುವ ನೀರು ಪೂರೈಕೆಗಾಗಿ ತುಂಬೆಯಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾದ ಹೊಸ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಜಮೀನು ಸಂತ್ರಸ್ತರ ಸಭೆ ಮಂಗಳೂರು ಸಹಾಯಕ ಕಮೀಷನರ್ ಅವರ ಬಂಟ್ವಾಳ ತಾಲೂಕು ಕಚೇರಿಯಲ್ಲಿರುವ ನ್ಯಾಯಾಲದ ಸಭಾಂಗಣದಲ್ಲಿ ಗುರುವಾರ ನಡೆಯಿತು. ಇದು ರಹಸ್ಯ ಸಭೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸಹಾಯಕ ಕಮೀಷನರ್ ರೇಣುಕಾ ಪ್ರಶಾದ್ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಭೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಗ್ರಾಮ ಕರಣಿಕರು ಹಾಗೂ ಕಳ್ಳಿಗೆ, ಸಜೀಪ ಮುನ್ನೂರು, ಪಾಣೆಮಂಗಳೂರು, ಬಿ.ಮೂಡ, ಶಂಭೂರು ಗ್ರಾಮಗಳ ಸಂತ್ರಸ್ತರನ್ನು ಕೂರಿಸಿ ಸಂಧಾನ ಸಭೆ ನಡೆಸಿದರು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಈ ಸಭೆಯನ್ನು ಆಯೋಜಿಸಲಾಗಿತ್ತು.
ಮಾಹಿತಿ ತಿಳಿದ ಸಮಿತಿಯ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್, ಸುದೇಶ್ ಮಯ್ಯ, ಶರತ್ ಕುಮಾರ್ ಮೊದಲಾದವರು ಸಭೆಗೆ ತೆರಳಿದ್ದರಾದರೂ ಅವರನ್ನು ಒಳ ಪ್ರವೇಶಕ್ಕೆ ನಿರಾಕರಿಸಲಾಯಿತು. ಈ ಸಂದರ್ಭ ತಾಲೂಕು ಕಚೇರಿಯಲ್ಲಿದ್ದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಮಾಹಿತಿ ತಿಳಿದು ಸಂತ್ರಸ್ತರ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ತೆರಳಿ ಸಹಾಯಕ ಕಮೀಷನರ್ ಅವರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ಸಹಾಯಕ ಕಮೀಷನ್ ಅವರು ಪೊಲೀಸರನ್ನು ಕರೆಸಿ ಸಭಾಂಗಣದ ಸುತ್ತಾ ಬಂದೋ ಬಸ್ತ್ ಏರ್ಪಡಿಸಿದರು.
ಸದ್ಯಕ್ಕೆ 5 ಮೀಟರ್: ನೂತನ ವೆಂಟೆಡ್ ಡ್ಯಾಂನಲ್ಲಿ ಸದ್ಯಕ್ಕೆ 5 ಮೀಟರ್ನಷ್ಟು ಎತ್ತರಕ್ಕೆ ನೀರು ಸಂಗ್ರಹಿಸಲು ನಿರ್ಧರಿಸಲಾಗಿದ್ದು ಇದರಿಂದ ಮುಳುಗಡೆಯಾಗಲಿರುವ ಜಮೀನನ್ನು ಸ್ವಾಧೀನಪಡಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ ಎಂದು ಸಹಾಯಕ ಕಮೀಷನರ್ ರೆಣುಕಾ ಪ್ರಸಾದ್ ಅವರು ಸಭೆಗೆ ಮಾಹಿತಿ ನೀಡಿದರು. ಮುಳುಗಡೆಯಾಗುವ ಜಮೀನನ್ನು ಮಾರ್ಗ ಸೂಚಿ ದರದಲ್ಲಿ ಕ್ರಯಕ್ಕೆ ಪಡೆಯುವುದು, ಭೂಸ್ವಾಧೀನ ಪಡಿಸುವುದು ಹಾಗೆಯೇ ಲೀಸ್ ಮೂಲಕ ಪಡೆದುಕೊಳ್ಳುವುದು ಈ ಮೂರು ವಿಧದಲ್ಲಿ ಜಮೀನನ್ನು ವಶಪಡಿಸಿಕೊಳ್ಳಲು ಸರಕಾರ ಆಯ್ಕೆ ನೀಡಿದೆ.
ಸಂತ್ರಸ್ತರ ಬೇಡಿಕೆ: ನಾವು ಬಡ ಕೃಷಿಕರಾಗಿದ್ದು ಇದರಿಂದಲೇ ತಮ್ಮ ಜೀವನ ಸಾಗಬೇಕಿದೆ. ಜಮೀನು ಕಳೆದುಕೊಂಡರೆ ಜೀವನ ನಡೆಸಲು ಕಷ್ಟವಾಗಿದ್ದು ಕೃಷಿಗೆ ಯೋಗ್ಯವಾದ ಬದಲಿ ಜಮೀನು ನೀಡಿದಲ್ಲಿ ನಮ್ಮ ಪಟ್ಟ ಜಮೀನನ್ನು ಬಿಟ್ಟು ಕೊಡಲು ಸಿದ್ಧರಿದ್ದೇವೆ ಎಂದು ಸಂತ್ರಸ್ತೆ ಬಿ.ಮೂಡದ ಶೋಭಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಲೀಸ್ ಮೂಲಕ ಜಮೀನು ನೀಡಿದರೆ ಬೇರೆ ಯಾವುದೇ ಉಪಯೋಗಕ್ಕೆ ಬಾರದ ಕಾರಣ ಲೀಸ್ ಮೂಲಕ ಜಮೀನು ನೀಡಲು ತಮ್ಮ ಒಪ್ಪಿಗೆ ಇಲ್ಲ ಎಂದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ವಾದಿಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬೆಲೆಬಾಳುವ ಜಮೀನುಗಳಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪಡಿಸಿದ್ದ ಸಂದರ್ಭ ನಿಗದಿ ಪಡಿಸಿದ ಪರಿಹಾರಧನ ನೀಡಿದ ರೀತಿಯಲ್ಲೇ ನಮಗೂ ಪರಿಹಾರ ನೀಡಿದರೆ ತಮ್ಮ ಜಮೀನನ್ನು ಬಿಟ್ಟುಕೊಡಲು ಸಿದ್ಧರಿದೇವೆ ಎಂದು ಸಂತ್ರಸ್ತ ಶ್ರೀನಿವಾಸ್ ಪೈ ಎಂಬವರು ಅಭಿಪ್ರಾಯವ್ಯಕ್ತಪಡಿಸಿದರು. ಕೊನೆಗೆ ಮುಳುಗಡೆಯಾಗುವ ಜಮೀನಿಗೆ ರಾ.ಹೆ. ಭೂಸ್ವಾಧೀನ ಪಡಿಸಿದ ವೇಳೆ ನಿಗದಿಪಡಿಸಿದ ಪರಿಹಾರ ಧನದಂತೆ ಪರಿಹಾರ ನೀಡಿದಲ್ಲಿ ಜಮೀನು ಬಿಟ್ಟು ಕೊಡಲು ಸಭೆಯಲ್ಲಿ ಸಂತ್ರಸ್ತರು ಒಪ್ಪಿಗೆ ಸೂಚಿಸಿದರು.
ಮಧ್ಯವರ್ತಿಗಳಿಗೆ ಅವಕಾಶವಿಲ್ಲ:
ಸಂತ್ರಸ್ತ ರೈತರು ಯಾವುದೇ ಸಮಸ್ಯೆ ಇಲ್ಲವೇ ಮಾಹಿತಿ ಬೇಕಾದಲ್ಲಿ ಮಧ್ಯವರ್ತಿಗಳನ್ನು ಕರೆದುಕೊಂಡು ಬಾರದೆ ನೇರವಾಗಿ ತಹಶೀಲ್ದಾರರನ್ನು ಸಂಪರ್ಕಿಸುವಂತೆ ಸಹಾಯಕ ಕಮೀಷನರ್ ಅವರು ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಂತ್ರಸ್ತ ರೈತರಿಗೆ ಸೂಚಿಸಿದರು. ಮುಂದಿನ ಸಭೆ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ನಡೆಯಲಿದ್ದು ದೂರವಾಣಿ ಇಲ್ಲವೇ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಸಂತ್ರಸ್ತರಾದ ಪ್ರಕಾಶ್ ಆಚಾರ್ಯ, ಬೋಜಶೆಟ್ಟಿ ಕುಪ್ಪಿಲ, ರಾಮಚಂದ್ರ ಶೆಟ್ಟಿ, ಸಂಜೀವ ಮೂಲ್ಯ, ಮನೋಹರ್ ಮೂಲ್ಯ, ಕರುಣಾಕರ ಶೆಟ್ಟಿ, ಮೋಹನ್ ರೈ, ಸವಿತ, ನಾಗೇಶ್ ಗಟ್ಟಿ, ಸಂದೇಶ್, ರಮಚಂದ್ರ ಶೆಣೈ ಉಪಸ್ಥಿತರಿದ್ದರು.
ಹೋರಾಟ ಸಮಿತಿ ಖಂಡನೆ:
ಪೊಲೀಸ್ ಬಂದೋಬಸ್ತ್ನಲ್ಲಿ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವರವರ ಉಪಸ್ಥಿತಿಯಲ್ಲಿ 5 ಗ್ರಾಮಗಳ ಬೆರಳೆಣಿಕೆಯ ಸಂತ್ರಸ್ತರ ಸಭೆಯನ್ನು ಗುಟ್ಟಾಗಿ ನಡೆಸಿರುವುದನ್ನು ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಖಂಡಿಸಿದೆ.
ಸಂತ್ರಸ್ತರಲ್ಲದ ವ್ಯಕ್ತಿಗಳನ್ನು ಕುಳ್ಳಿರಿಸಿದರೂ ಸಂತ್ರಸ್ತರು ನಿಯೋಜಿತ ಗ್ರಾಮ ಪ್ರತಿನಿಧಿಗಳಾದ ಎಂ.ಸುಬ್ರಹ್ಮಣ್ಯ ಭಟ್,ಸುದೇಶ್ ಮಯ್ಯ ಸಭೆಯಿಂದ ಹೊರ ಹಾಕಿರುವುದು ತಾಲೂಕು ಆಡಳಿತದ ತುಘಲಕ್ ದರ್ಬಾರ್ ಆಗಿದೆ ಎಂದು ಆರೋಪಿಸಿದ ಸಮಿತಿಯ ಪದಾಧಿಕಾರಿಗಳು ಒಡೆದು ಆಳುವ ತಂತ್ರವನ್ನು ಅನುಸರಿಸಿ ರೈತರನ್ನು ವ್ಯವಸ್ಥಿತವಾಗಿ ವಂಚನೆ ಮಾಡುವ ಈ ಪ್ರವೃತ್ತಿಯನ್ನು ರೈತರು ಖಂಡಿಸಿದ್ದಾರೆ.
ಸಭೆ ನಡೆಸುವ ಮೊದಲು ಮಂಗಳೂರು ಮಹಾನಗರ ಪಾಲಿಕೆಯವರು ಸಂತ್ರಸ್ತ ರೈತರಿಗೆ ನೋಟೀಸ್ ಅವರು ಸರ್ವೆ ಕಾರ್ಯ ಮಾಡುವ ಸಮಯದಲ್ಲಿ ರೈತರನ್ನು ಒಮ್ಮತಕ್ಕೆ ತೆಗೆದುಕೊಂಡು ಅವರ ಸಮಕ್ಷಮದಲ್ಲಿ ಸರ್ವಕಾರ್ಯ ನಡೆಸಿ ಗಡಿ ಗುರುತು ಮಾಡಬೇಕೆಂದು ಆದೇಶಿಸಿದ್ದರು.
ಆದರೆ ಈಗಿನ ಜಿಲ್ಲಾಧಿಕಾರಿ ಜಗದೀಶ್ ಅವರು ಮುಳುಗಡೆ ಪ್ರದೇಶದಲ್ಲಿ ರೈತರ ಸಭೆ ಕರೆದು ರೈತರಿಗೆ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆದರೆ ಗುರುವಾರ ಮೌಖಿಕ ಆಮಂತ್ರಿತ ಸಂತ್ರಸ್ತ ರೈತರನ್ನು ಮಾತ್ರ ಸೇರಿಸಿ ಗ್ರಾಮಕ್ಕೆ ಒಬ್ಬ ಪ್ರತಿನಿಧಿ ಆಯೋಜಿಸಲ್ಪಟ್ಟಿದ್ದರೂ ಅವರನ್ನು ಸಭೆಯಿಂದ ಹೊರ ಹಾಕಿಹಾಕಿ ಸಹಾಯಕ ಕಮಿಷನರ್ ಹಾಗೂ ತಹಶೀಲ್ದಾರರು ರೈತರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಸಮಿತಿಯು ಪ್ರಕಟನೆಯಲ್ಲಿ ಆರೋಪಿಸಿದೆ.
