ಬಂಟ್ವಾಳ : ಅಪ್ರಾಪ್ತ ತರುಣಿಗೆ ಲೈಫ್ ಕೊಡಲು ಬಂದ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಒದೆಸಿಕೊಂಡು ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ ಘಟನೆ ಸರಪಾಡಿಯಲ್ಲಿ ಜು. 2ರಂದು ಸಂಜೆ ನಡೆದಿದೆ.
ಕಳೆದ ಎ. 17ರಂದು ಸರಪಾಡಿಯ ಅಪ್ರಾಪ್ತ ಅಪಹೃತ ತರುಣಿಯನ್ನು ಪೊಲೀಸರು ರಕ್ಷಿಸಿ ಕರೆದು ತಂದಿರುವುದನ್ನು ಪತ್ರಿಕೆಯಲ್ಲಿ ಓದಿದ್ದ ಈ ಮಹಾಶಯ ಅವಳನ್ನು ಯಾರು ವಿವಾಹ ಆಗುವ ಸಂಭವವಿಲ್ಲ ಎಂದು ಹೇಳಿಕೊಂಡು ಸ್ವತ: ವಿವಾಹ ಆಗುವುದಾಗಿ ನಂಬಿಸಲು ಯತ್ನಿಸಿದ್ದ.
ತರುಣಿಯ ಮನೆಯನ್ನು ವಿಚಾರಿಸಿ ಬಂದವನು ಮೊದಲು ಬಂದಿರುವುದು ಹತ್ತಿರದ ಇನ್ನೊಂದು ಮನೆಗೆ. ಆತನ ಮಾತಿನ ಶೈಲಿಯಿಂದ ಶಂಕಿತರಾದ ಮನೆಯವರು ಈತ ಇನ್ನೊಂದು ಜಾಲದ ವ್ಯಕ್ತಿ ಎಂದೇ ಪರಿಗಣಿಸಿ ಚೆನ್ನಾಗಿ ವಿಚಾರಿಸಿದ್ದರು.
ಅವನು ಮೂಲತ: ಮಡಿಕೇರಿ ಕುಶಾಲನಗರ ಶುಂಠಿಕೊಪ್ಪ 7ನೇ ಹೊಸಕಟ್ಟೆ ನಿವಾಸಿ. ಹೆಸರು ಲಕ್ಷ್ಮಣ ಕಳೆದ ಕೆಲವು ಸಮಯದಿಂದ ಧರ್ಮಸ್ಥಳದ ಹೋಟೆಲ್ವೊಂದರಲ್ಲಿ ದೋಸೆ ಹೊಯ್ಯುವ ವೃತ್ತಿ ಮಾಡುತ್ತಿದ್ದ.
ಅವನ ಒಟ್ಟಿಗೆ ಇದ್ದವರು ಅಪ್ರಾಪ್ತ ತರುಣಿ ಅಪಹರಣದ ಕತೆಯನ್ನು ಹೇಳಿ ಅವಳನ್ನು ಇನ್ನು ಯಾರು ವಿವಾಹ ಆಗುತ್ತಾರೆ ಎಂಬಂತೆ ಮಾತನಾಡಿದ್ದರು.
ಇದನ್ನು ಕೇಳಿಕೊಂಡಾಗ ಅವನಲ್ಲಿ ಒಳಗಿಂದೊಳಗೆ ಆಸೆಪಟ್ಟು ತಾನೇಕೆ ಪ್ರಯತ್ನಿಸಬಾರದು ಎಂದು ಪೇಪರ್ ಕಟ್ಟಿಂಗ್ ಇಟ್ಟುಕೊಂಡು ವಿಳಾಸ ಕೇಳಿ ವಿಚಾರಿಸಿ ಬಂದಿದ್ದ.
ಪೊಲೀಸರ ಕೈಗೆ ಸಿಕ್ಕಿಕೊಳ್ಳುತ್ತಿದ್ದಂತೆ ಅವನ ಪ್ರವರಗಳು ಒಂದೊಂದಾಗಿ ಹೊರಕ್ಕೆ ಬರತೊಡಗಿತು. ಅವನಿಗೆ ಪತ್ನಿ ಮತ್ತು ಮಗುವಿದೆ. ಮೂರು ವರ್ಷಗಳ ಹಿಂದೆ ಊರು ಬಿಟ್ಟು ಬಂದಿದ್ದ. ಅವಳೀಗ ಸ್ಥಳೀಯ ಪುರಸಭೆಯಲ್ಲಿ ಆಯಾ ಕೆಲಸ ಮಾಡಿಕೊಂಡು ಇನ್ನೊಬ್ಬನ ಜೊತೆಗೆ ಸಂಸಾರ ಮಾಡುತ್ತಿದ್ದಾಳೆ.
ಪೊಲೀಸರು ವಂಚನೆಗೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದು, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *