ಬಂಟ್ವಾಳ: ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ದೇವದಾಸ ಯಾನೆ ದೇವು(30), ಪ್ರಶಾಂತ್(28), ಸತೀಶ ಯಾನೆ ಕಾಳು(30), ಉಮೇಶ(30) ಬಂಧಿತ ಆರೋಪಿಗಳು.
ಆರೋಪಿಗಳು ಉಡುಪಿ ಕಡೆಗೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಕೊಡ್ಮಾಣ್ ಅಬ್ಬೆಟ್ಟು ಶಾಲೆಯ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲೂರು ಬದ್ರಿಯಾ ನಗರದ ನಿವಾಸಿ ಎಂಬವರ ಪುತ್ರ, ವಿದ್ಯಾರ್ಥಿ ಮುಹಮ್ಮದ್ ಜುನೈದ್(17) ಮತ್ತು ಬಿ.ಸಿ.ರೋಡ್ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮುಹಮ್ಮದ್ದ್ ಸಿನಾನ್(18) ಎಂಬವರು ಗುರುಪುರ ಕೈಕಂಬದಲ್ಲಿ ಮದುವೆ ಕಾರ್ಯ ಮುಗಿಸಿ ಬೈಕ್‍ನಲ್ಲಿ ಮರಳುತ್ತಿದ್ದಾಗ ಆರೋಪಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ನಿರ್ದೇಶನದಂತೆ, ಡಿಸಿಐಬಿ ನಿರೀಕ್ಷಕರಾದ ಎ.ಅಮಾನುಲ್ಲಾ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಮಾರ್ಗದರ್ಶನದಂತೆ ಡಿಸಿಐಬಿ ಸಿಬ್ಬಂದಿಯಾದ ಸಂಜೀವ ಪುರುಷ, ಲಕ್ಷ್ಮಣ ಕೆ.ಜಿ., ಪಳನಿವೇಲು, ಇಕ್ಬಾಲ್, ಉದಯ ರೈ, ಸತೀಶ, ವಾಸು ನಾಯ್ಕ ಮತ್ತು ವಿಜಯ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
