ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿ, ಕೋತಿಗಳ ಕಾಟದಿಂದಾಗಿ ತೆಂಗಿನ ತೋಟಕ್ಕೆ ತೀವ್ರ ಹಾನಿಯಾಗುತ್ತಿದ್ದು ತೆಂಗಿನ ಎಳೆ ಕಾಯಿಗಳನ್ನು ನಾಶ ಮಾಡುತ್ತಿವೆ. ಇದರಿಂದಾಗಿ ಅಪಾರ ನಷ್ಟ ಉಂಟಾಗುತ್ತಿದೆ ಎಂದು ಸಂಗಬೆಟ್ಟು ಗ್ರಾಮ ಸಭೆಯಲ್ಲಿ ಸಂತ್ರಸ್ತ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದರು.
ಕರ್ಪೆ ಗ್ರಾಮದ ಕಿನ್ನಾಜೆ, ನಡಿಬೈಲು, ಕಲ್ಲಾಪು, ಪೂವಳ ಪರಿಸರದಲ್ಲಿ ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಡಿತರ ಚೀಟಿ ಸಮಸ್ಯೆ ನಿವಾರನೆಗೆ ಹಾಗೂ ಸಿದ್ದಕಟ್ಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಭೆನಿರ್ಣಯ ಕೈಗೊಂಡಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಗ್ರಾಮ ಸಭೆ ಎಂದರೆ ಹಳ್ಳಿಯ ವಿಧಾನ ಸಭೆ. ಇದರಲ್ಲಿ ಜನಸಾಮಾನ್ಯರು ಕಡ್ಡಾಯವಾಗಿ ಭಾಗವಹಿಸಿ ಗ್ರಾಮದ ಅಭಿವೃದ್ಧಿ ಮತ್ತು ಇನ್ನಿತರ ಕುಂದುಕೊರತೆಗಳ ಬಗ್ಗೆ ಧ್ವನಿ ಎತ್ತುವುದರ ಮೂಲಕ ಸ್ವಚ್ಚ, ಮಾದರಿ ಗ್ರಾಮ ಪಂಚಾಯತನ್ನಾಗಿ ರೂಪಿಸಲು ಸಹಕಾರಿಯಾಗಬೇಕೆಂದರು. ಗ್ರಾ.ಪಂ. ಅಧ್ಯಕ್ಷೆ ಗುಲಾಬಿರವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ಗ್ರಾಮ ಸಭೆಯ ನೋಡಲ್ ಅಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಜಯಣ್ಣ ಭಾಗವಹಿಸಿ ಮಾಹಿತಿ ನೀಡಿದರು.
ಗ್ರಾ.ಪಂ. ಸದಸ್ಯರಾದ ಕೆ.ಮಯ್ಯದ್ದಿ, ಸುರೇಶ್ ಕುಲಾಲ್, ಮಾಧವ ಶೆಟ್ಟಿಗಾರ್, ದೇವಪ್ಪ ಕರ್ಕೇರಾ, ಶೇಖರ ನಾಯ್ಕ, ಉಷಾ, ಸುಭಾಕ್ಷಿಣಿ, ಶಾರದ, ನಳಿನಿ, ವಿಮಲ ಮೋಹನ್, ಪದ್ಮಲತಾ, ಇಲಾಖಾಧಿಕಾರಿಗಳಾದ ಮೆಸ್ಕಾಂನ ತಿಲಕ್ ಕುಮಾರ್, ಪಶುಸಂಗೋಪಣೆಯ ಡಾ. ಉಮೇಶ್ ಕೃಷ್ಣ, ನಂದನ ಶೆಣೈ, ಗ್ರಾಮಲೆಕ್ಕಿಗ ಜನಾರ್ಧನ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡಿಸ್ ಸ್ವಾಗತಿಸಿದರು ಗ್ರಾ.ಪಂ.ನ ವರದಿಯನ್ನು ಲೆಕ್ಕಸಹಾಯಕ ಪುಟ್ಟಸ್ವಾಮಿ ಕೆ ಮತ್ತು ಗುಮಾಸ್ತ ಮಹಾಬಲ ನಾಯ್ಕರವರು ಮಂಡಿಸಿದರು. ಗ್ರಾ.ಪಂ. ಸದಸ್ಯ ಶ್ರೀಧರ್ ಎಸ್.ಪಿ ವಂದಿಸಿದರು.
