ಬಂಟ್ವಾಳ: ಸೈಂಟ್ ರೀಟಾ ವಿದ್ಯಾಸಂಸ್ಥೆಯಲ್ಲಿ ಜೀವವಿಮಾ ನಿಗಮ ಬಂಟ್ವಾಳ ಹಾಗೂ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ವಿಮಾ ಶಾಲಾ ಘೋಷಣೆ ಮತ್ತು ಕ್ರಿಸ್‍ಮಸ್ ಕಾರ್ಯಕ್ರಮ ಡಿ.23ರಂದು ಜರುಗಿತು.
ಶಾಲಾ ಮಕ್ಕಳ ನಾಡಗೀತೆಯೊಂದಿಗೆ ಆರಂಭಗೊಂಡು ಜೀವ ವಿಮಾ ನಿಗಮ ಬಂಟ್ವಾಳ ಶಾಖಾಧಿಕಾರಿಯವರಾದ ಡಿ. ಬಾಲಕೃಷ್ಣ ಹಾಗೂ ಮದ್ವರಾಜ್ ಕಲ್ಮಾಡಿ ಅಭಿವೃದ್ಧಿ ಅಧಿಕಾರಿಯವರು ವಿಜ್ಞಾನ ಉಪಕರಣಗಳನ್ನು ನೀಡುವ ಮೂಲಕ ವಿಮಾ ಶಾಲಾ ಘೋಷಣೆಯನ್ನು ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಜೊತೆಕಾರ್ಯದರ್ಶಿಗಳಾದ ವಂದನೀಯ ಎರಿಕ್ ಕ್ರಾಸ್ತರವರು ವಹಿಸಿದ್ದರು.

ಸಂಸ್ಥೆಯ ವಿವಿಧ ಸಮಿತಿಗಳ ಗೌರವ ಸಲಹೆಗಾರರಾದ ಸುದರ್ಶನ್ ಪಡಿಯಾರ್ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ವಿಟ್ಲ ಚರ್ಚಿನ ಡೀಕನ್ ಲೈಝೆಲ್ ಡಿ ಸೋಜ, ಜಂಟಿ ಶಾಲಾ ಮುಖ್ಯ ಶಿಕ್ಷಕರಾದ ಸಚಿನ್ ಎಂ. ಹಾಗೂ ಸಿ| ಜೊನೆಟ್ ಡಿ ಸೋಜ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿಮಾ ಶಾಲಾ ಘೋಷಣೆಯಲ್ಲಿ ಶ್ರಮವಹಿಸಿ ಮಕ್ಕಳ ಹಾಗೂ ಪೋಷಕರ ಜೀವ ವಿಮೆ ಪಾಲಿಸಿ ಮಾಡಿದ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕರಾದ ಸತ್ಯನಾರಾಯಣ ರೈ ಡಿ. ಇವರನ್ನು ಸನ್ಮಾನಿಸಲಾಯಿತು. ಸಹ ಶಿಕ್ಷಕರಾದ ಜಯರಾಮ ಶಾಸ್ತ್ರಿಯವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಆಂಗ್ಲಮಾದ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ವಿಶ್ಮಿತ ಕ್ರಿಸ್‍ಮಸ್ ಕಾರ್ಯಕ್ರಮ ನಿರ್ವಹಿಸಿ ಕುಮಾರಿ ಅಶ್ವಿನಿಯವರು ಧನ್ಯವಾದವಿತ್ತರು. ಕೊನೆಯಲ್ಲಿ ಮಕ್ಕಳಿಂದ ಕ್ರಿಸ್‍ಮಸ್ ಸಂದೇಶವನ್ನು ಸಾರುವ ನೃತ್ಯ ರೂಪಕವನ್ನು ನಡೆಸಲಾಯಿತು.
