ಬಂಟ್ವಾಳ: ಬಸ್ಬೇ ಮತ್ತು ರಸ್ತೆ ಅಗಲೀಕರಣಕ್ಕಾಗಿ ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯನ್ನು ಅಗೆದು ಒಂದೂವರೆ ತಿಂಗಳು ಕಳೆದರೂ ಇನ್ನೂ ಕೂಡ ಹೊಂಡಕ್ಕೆ ಜಲ್ಲಿ ತುಂಬಿಸಿ ಸುಸ್ಥಿತಿಗೆ ತಾರದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯವೈಖರಿಯನ್ನು ಖಂಡಿಸಿ ಕೈಕಂಬ ಅಂಗಡಿ ಮಾಲಕರ ಮತ್ತು ಸಾರ್ವಜನಿಕ ನಾಗರಿಕರ ಸಮಿತಿಯಿಂದ ಸೋಮವಾರ ಬೆಳಗ್ಗೆ ಹೆದ್ದಾರಿ ತಡೆಗೊಳಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಹೆದ್ದಾರಿಯ ಎರಡೂ ಬದಿಯಲ್ಲಿ ನಾಲ್ಕು ಅಡಿ ಆಳಕ್ಕೆ ಅಗೆದು ನಿರ್ಮಿಸಿರುವ ಹೊಂಡವನ್ನು ಒಂದೂವರೆ ತಿಂಗಳು ಕಳೆದರೂ ಇನ್ನೂ ಮುಚ್ಚಿಲ್ಲ. ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಇಲ್ಲಿನ ಅಂಗಡಿಗಳ ವ್ಯಾಪಾರಕ್ಕೆ, ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಆಟೋ ರಿಕ್ಷಾ ಪಾರ್ಕಿಂಗ್ಗೆ ಜಾಗವಿಲ್ಲದಾಗಿದ್ದು ಪಾದಾಚಾರಿಗಳಿಗೂ ನಡೆದಾಡಲು ಫುಟ್ಪಾತ್ ಇಲ್ಲದಾಗಿದೆ ಎಂದು ಹೇಳಿದ ಪ್ರತಿಭಟನಕಾರರು, ಹೊಂಡ ದಾಟುವಾಗ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದರು.
ಅಗೆದ ರಸ್ತೆಯನ್ನು ಸುಸ್ಥಿತಿಗೆ ತರುವ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವತೆಯ ಕೊರತೆ ಇದೆ. ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸಬೇಕಾಗಿದೆ. ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಸಹಿತ ವಿವಿಧ ಜನಪ್ರತಿನಿಧಿಗಳು ಇದೇ ದಾರಿಯಾಗಿ ಓಡಾಡುತ್ತಿದ್ದರೂ ಈ ರಸ್ತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಿವಿ ಹಿಂಡುವ ಕೆಸಲ ಮಾಡುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು, ತಹಶೀಲ್ದಾರರು ಪುರಸಭೆಯತ್ತ ಬೊಟ್ಟು ಮಾಡಿದರೆ, ಪುರಸಭೆ ಟ್ರಾಫಿಕ್ ಎಸೈ ಚಂದ್ರಶೇಖರಯ್ಯರವರ ಮೇಲೆ ಬೆರಳು ತೋರಿಸುತ್ತಿದ್ದಾರೆ. ಪ್ರಮುಖವಾಗಿ ಇದರ ಕಾರ್ಯನಿರ್ವಹಿಸಬೇಕಾಗಿದ್ದ ಹೆದ್ದಾರಿ ಇಲಾಖೆ ಇತ್ತ ತಲೆಹಾಕಿ ನೋಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಸಮಸ್ಯೆಗೆ ಯಾವ ಇಲಾಖೆಯ ಅಧಿಕಾರಿಗಳು, ಪುರಸಭೆ, ತಾಲೂಕಿನ ಜನಪ್ರತಿನಿಧಿಗಳು ಸ್ಪಂದಿಸದಿರುವುದರಿಂದ ಎರಡು ವಾರದ ಹಿಂದೆ ಕೈಕಂಬದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಶೀಲ್ದಾರ್ ಪುರದಂರ ಹೆಗ್ಡೆ ಎರಡು ದಿನದಲ್ಲಿ ಹೊಂಡಕ್ಕೆ ಜಲ್ಲಿ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ತಹಶೀಲ್ದಾರರ ಭರವಸೆ ಈಡೇರದಿರುವುದರಿಂದ ಕಳೆದ ವಾರ ಪತ್ರಿಕಾ ಗೋಷ್ಠಿ ಕರೆದು ಕಾಮಗಾರಿ ಪೂರ್ಣಗೊಳಿಸದಿದ್ದರೆ ಜನವರಿ 2ರಂದು ಕೈಕಂಬದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಬೆಳಗ್ಗೆ 10ಗಂಟೆ ಸುಮಾರಿಗೆ ಆರಂಭವಾದ ಪ್ರತಿಭಟನೆ 10:30 ಆದಂತೆ ತೀವ್ರಗೊಂಡಿತು. ಮೆಡಿಕಲ್, ಹಾಲು ಅಂಗಡಿಗಳನ್ನು ಹೊರೆತುಪಡಿಸಿ ಕೈಕಂಬದ ಎಲ್ಲ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ಆಟೋ ಚಾಲಕರು ಬಾಡಿಗೆ ಮಾಡದೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಒಂದು ಹಂತದಲ್ಲಿ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ ಪ್ರತಿಭಟನಾಕಾರರು ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಬಂಟ್ವಾಳ ಪೊಲೀಸ್ ಇಲಾಖೆ, ಮೆಸ್ಕಾಂ, ಬಂಟ್ವಾಳ ತಹಶೀಲ್ದಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಧಿಕಾರಿಗೆ, ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಸದಸ್ಯರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದರು. ಪಟ್ಟು ಬಿಡದ ಪ್ರತಿಭಟನಕಾರರು ರಾ.ಹೆ. ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಲಿಖಿತ ಭರವಸೆ ನೀಡುವ ವರೆಗೆ ಸ್ಥಳದಿಂದ ಕದಡುವುದಿಲ್ಲ ಎಂದು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾ.ಹೆ. ಅಧಿಕಾರಿಗಳನ್ನು ತಾನು ಸ್ಥಳಕ್ಕೆ ಕರೆಸುತ್ತೇನೆ. ಹೆದ್ದಾರಿ ತಡೆಗೊಳಿಸುವ ಬದಲು ಹೆದ್ದಾರಿ ಪಕ್ಕದಲ್ಲಿ ಪ್ರತಿಭಟನೆ ನಡೆಸಿ ಎಂದು ಇದೇ ವೇಳೆ ಡಿವೈಎಸ್ಪಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಪ್ರತಿಭಟನಕಾರರು ಹೆದ್ದಾರಿಯ ಒಂದು ಬದಿ ಕುಳಿತು ಘೋಷಣೆ ಕೂಗಲಾರಂಭಿಸಿದರು.

ಮಧ್ಯಾಹ್ನ 1:30ರ ವೇಳೆಗೆ ಸ್ಥಳಕ್ಕೆ ಆಗಮಿಸಿದ ರಾ.ಹೆ.ಪ್ರಾಧಿಕಾರಿದ ಇಬ್ಬರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡ ಪ್ರತಿಭಟನಕಾರರು ಅವರ ವಿರುದ್ಧ ಹರಿಹಾಯ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರ ಭದ್ರತೆಯೊಂದಿಗೆ ಸಮಿತಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು ಹತ್ತು ದಿವಸಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಹತ್ತು ದಿವಸದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಪಂಪ್ವೆಲ್ನಲ್ಲಿರುವ ರಾ.ಹೆ.ಪ್ರಾಧಿಕಾರದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೈಕಂಬ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಯಾಕೂಬು, ಪ್ರಮುಖರಾದ ಪಿ.ಎ. ರಹೀಂ, ಶಾಹುಲ್ ಹಮೀದ್ ಎಸ್.ಎಚ್., ಕೆ.ಎಚ್.ಅಬೂಬಕರ್, ಇಸ್ಹಾಕ್ ತಲಪಾಡಿ, ಅಕ್ಬರ್ ಅಲಿ, ಇಕ್ಬಾಲ್ ನಂದರಬೆಟ್ಟು, ಮಚ್ಚೇಂದ್ರನಾಥ ಸಾಲಿಯಾನ್, ಸುರೇಶ್ ಟೈಲರ್, ಅಝರುದ್ದೀನ್ ಸಹಿತ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ
ಪ್ರತಿಭಟನಕಾರರು ಹೆದ್ದಾರಿ ತಡೆ ನಡೆಸಿದ್ದರಿಂದ ಕೈಕಂಬದಿಂದ ಬಿ.ಸಿ.ರೋಡು ನಾರಾಯಣಗುರು ವೃತ್ತದವರೆಗೂ ವಾಹನಗಳು ತಾಸುಗಟ್ಟಲೆ ಹೊತ್ತು ಸಾಲುಗಟ್ಟಿ ನಿಂತವು. ಸುಮಾರು ಮೂರು ಗಂಟೆ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿದ್ದು ಪೆÇಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸಪಟ್ಟರು. ಕೈಕಂಬದಲ್ಲಿ ಉಂಟಾದ ಟ್ರಾಫಿಕ್ ಜಾಮ್ನಿಂದ ಬಂಟ್ವಾಳ ಪೇಟೆ, ಬೈಪಾಸ್, ಬಿ.ಸಿ.ರೋಡ್ ಮೇಲ್ಸಾತುವೆ ಕೆಲ ಭಾಗದಲ್ಲಿ ಹಾಗೂ ಬಿ.ಸಿ.ರೋಡ್ – ಕಲ್ಲಡ್ಕ ರಸ್ತೆಯಲ್ಲೂ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಅಪರಾಹ್ನ 3 ಗಂಟೆಯ ವರೆಗೂ ಹೆದ್ದಾರಿಯಲ್ಲಿ ವಾಹನಗಳು ಸರದಿ ಸಾಲಿನಲ್ಲಿ ಅಮೆಗತಿಯಲ್ಲಿ ಸಾಗಿದವು.

ಜಿಲ್ಲೆಗೆ ಬೆಂಕಿ ಹಾಕುವ ಮುನ್ನ ಹೊಂಡಕ್ಕೆ ಜಲ್ಲಿ ಹಾಕಿ!
ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದ ನಳೀನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಜಿಲ್ಲೆಗೆ ಬೆಂಕಿ ಹಾಕುವ ಬದಲು ತನ್ನ ವ್ಯಾಪ್ತಿಗೆ ಬರುವ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ಸಮಸ್ಯೆಗಳನ್ನು ಬಗೆಹರಿಸಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಪ್ರತಿಭಟನಕಾರರು ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರ ಎದುರಲ್ಲೇ ಧಿಕ್ಕಾರದ ಘೋಷಣೆ
ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸುತಿದ್ದ ರಸ್ತೆಯ ಇನ್ನೊಂದು ಬದಿಯಲ್ಲಿ ಸಚಿವ ರಮಾನಾಥ ರೈ ಅವರ ವಾಹನ ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಸಾಗಿತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಜೋರಾಗಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕೆಲವು ಪ್ರತಿಭಟನಕಾರರು ಸಚಿವರ ಕಾರಿನ ಕಡೆಗೆ ನುಗ್ಗುತ್ತಿದ್ದಂತೆ ಪರಿಸ್ಥಿತಿಯ ಗಂಭೀರ್ಯತೆ ಅರಿತ ಬಂದೋಬಸ್ತ್ನಲ್ಲಿದ್ದ ಪೊಲೀಸರು ಇತರ ವಾಹನಗಳನ್ನು ತಡೆದು ಸಚಿವರ ಕಾರು ಮುಂದೆ ಸಂಚಾರಿಸುವಂತೆ ಅನುವು ಮಾಡಿಕೊಟ್ಟರು.