ಬಂಟ್ವಾಳ: ಡಾ. ಬಿ.ಆರ್.ಅಂಬೇಡ್ಕರ್‍ರವರ ಆಶಯ ಈಡೇರಿಸುವ ದಿಸೆಯಲ್ಲಿ ಇಡೀ ರಾಷ್ಟದಲ್ಲೇ ಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಳೆದ ವರ್ಷ ನಡೆಸಿರುವ ಜಾತಿ ಸಮೀಕ್ಷೆಯ ವರಿದಿಯಲ್ಲಿ ಜನವರಿ ಅಂತ್ಯದಲ್ಲಿ ಸರಕಾರಕ್ಕೆ ಸಲ್ಲಿಸಲಾಗುತ್ತಿದ್ದು ಮುಂದಿನ ಬಜೇಟ್‍ನಲ್ಲಿ ಇದರ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದರು.

2
ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಕಚೇರಿ ಬಳಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮತ್ತು ಹೋಬಳಿ ಮಟ್ಟದ ಎರಡು ಅಂಬೇಡ್ಕರ್ ಭವನ ಹಾಗೂ ಗಡಿ ಪ್ರದೇಶಗಳ ಕಾಮಗಾರಿಗಳಿಗೆ ಮಂಗಳವಾರ ಶಿಲನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅಂಬೇಡ್ಕರ್‍ರವರ ಸಂವಿಧಾನದ ಆಶಯದಂತೆ ಸಮಾಜಿಕ ನ್ಯಾಯ, ಸಮ ಸಮಾಜದ ಕನಸು ಈಡೇರಿಸುವ ನಿಟ್ಟಿನಲ್ಲಿ ಪ್ರತೀ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರ ಮುಂದಾಗಿದ್ದು ಇಡೀ ರಾಷ್ಟ್ರದಲ್ಲೇ ಕರ್ನಾಟಕ ಸರಕಾರ ದಲಿತರ ಹಾಗೂ ಹಿಂದುಳಿದ ವರ್ಗದ ಏಳಿಗೆಗಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಟಿದ್ದು ಕರ್ನಾಟಕ ಸರಕಾರದ ಈ ಸಾಧನೆಗೆ ಕೇಂದ್ರ ಸರಕಾರದ ಸಮಾಜ ಕಲ್ಯಾಣ ಸಚಿವರು ಶಹಬಾಸ್ ಗಿರಿ ನೀಡಿದ್ದಾರೆ ಎಂದರು.

5
ಸಚಿವ ಬಿ.ರಮಾನಾಥ ರೈರವರ ಮನವಿ ಮೇರೆಗೆ ಬಂಟ್ವಾಳ ತಾಲೂಕು ಅಂಬೇಡ್ಕರ್ ಭವನಕ್ಕೆ ಹೆಚ್ಚುವಾರಿಯಾಗಿ ಒಂದು ಕೋಟಿ ರೂ.ವನ್ನು ಪ್ರಕಟಿಸಿದ ಸಚಿವ ಅಂಜನೇಯ, ತಾಲೂಕಿನ ಕೇಂದ್ರ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭವನ ಅತ್ಯಂತ ಸುಂದರ ಮತ್ತು ಸುಸಜ್ಜಿತವಾಗಿ ಮೂಡಿ ಬರುವ ನಿಟ್ಟಿನಲ್ಲಿ ಇನ್ನೂ ಹೆಚ್ಚುವರಿ ಅನುದಾನ ಒದಗಿಸಲು ತಾನು ಬದ್ಧನಾಗಿದ್ದೇನೆ. ಈ ಭವನ ಎಲ್ಲ ಜನಾಂಗದ ಶುಭಸಮಾರಂಭ ಹಾಗೂ ಸರಕಾರಿ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು. ತನಗೆ ರಾಜಕೀಯ ದೀಕ್ಷೆ ನೀಡಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ನನಗೆ ಅಪಾರವಾದ ಗೌರವ ಮತ್ತು ಪ್ರೀತಿ ಇದೆ. ಈ ಜಿಲ್ಲೆಯ ಸಚಿವರು ಅಥವಾ ಶಾಸಕರು ಅಭಿವೃದ್ಧಿಗೆ ಸಬಂಧಿಸಿ ಯಾವುದೇ ಕೆಲಸಗಳನ್ನು ಪ್ರಸ್ತಾವಿಸಿದರೆ ಆದ್ಯೆತೆಯ ನೆಲೆಯಲ್ಲಿ ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದರು. ಅಭಿವೃದ್ಧಿಯ ಹರಿಕಾರ: ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಮಾನಾಥ ರೈರವರ ಇಚ್ಚಾಶಕ್ತಿ ಹಾಗೂ ಬದ್ಧತೆಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಜನರ ಅಣತಿಗೆ ತಕ್ಕಂತೆ ಕಾರ್ಯನಿರ್ವಹಿಸಿದರೆ ಜನರೇ ಅವರ ಕೈ ಹಿಡಿಯುತ್ತಾರೆ ಎಂಬುದಕ್ಕೆ ಸಚಿವ ರಮನಾಥ ರೈರವರೇ ಸಾಕ್ಷಿ. ಜೊತೆಗೆ ದ.ಕ. ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಸರಕಾರಕ್ಕೂ ಬಲ ನೀಡಿದ್ದಾರೆ ಎಂದ ಅವರು ಸಚಿವ ರೈ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.

ಯು.ಟಿ.ಖಾದರ್ ಮುಸ್ಲಿಮ್ ಬ್ರಾಹ್ಮಣ: ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚುವರಿ ಅನುದಾನ ನೀಡದಿದ್ದರೂ ಪರವಾಗಿಲ್ಲ. ನಿಮ್ಮ ಕ್ಷೇತ್ರಕ್ಕೆ ಒದಗಿಸುವ ಅನುದಾನಕ್ಕಿಂತ ಶೇಕಡ 1ರಷ್ಟು ಕಡಿಮೆ ಯಾದರೂ ಅನುದಾನವನ್ನು ನಮಗೆ ಒದಗಿಸಿ ಎಂದು ಸಚಿವ ಯು.ಟಿ.ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಚ್.ಆಂಜನೇಯರವರು ಖಾದರ್ ಸಾಹೇಬ್ರು ನನ್ನ ಬುಡಕ್ಕೆ ಕೈಹಾಕಿದ್ದಾರೆ. ಅವರೊಬ್ಬರು ಕ್ರಿಯಾಶೀಲ ಸಚಿವರಾಗಿದ್ದು, ಬುದ್ಧಿಬಂತಿಕೆಯಲ್ಲಿ ಅವರೊಬ್ಬ ಮುಸ್ಲಿಮ್ ಬ್ರಾಹ್ಮಣರಾಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಸದಂರ್ಭದಲ್ಲಿ ಇಡೀ ಸಭೆ ಕರತಾಡನ ಮಾಡಿತು.
ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅನ್ಯಾಯವಾದಾಗ ಅದನ್ನು ಪ್ರತಿಭಟಿಸುವ ಮೂಲಕ ನ್ಯಾಯ ಕೇಳಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ದಲಿತ ಸಂಘಟನೆಗಳು ನಿರಂತರ ಹೋರಾಟವನ್ನು ನಡೆಸಬೇಕು ಎಂದು ಕರೆ ನೀಡಿದರು.

ತಾಲೂಕಿನಲ್ಲಿ ವಾಲ್ಮಿಕಿ ಭವನ ನಿರ್ಮಾಣಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಹೋಬಳಿ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಕ್ಕೆಪದವು ಹಾಗು ಚೆನೈತ್ತೋಡಿಯನ್ನು ಆಯ್ಕೆಗೊಳಿಸಲಾಗಿದ್ದು ಇಲ್ಲಿ ತಲಾ 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಕುಡುಬಿ ಜನಾಂಗದ ಜಿಲ್ಲಾ ಮಟ್ಟದ ಸಭಾ ಭವನ ಕೂಡಾ ಬಂಟ್ವಾಳ ತಾಲೂಕಿನಲ್ಲೇ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಕೂಡಾ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಂಟ್ವಾಳ ತಾಲೂಕಿಗೆ ಎಆರ್‍ಟಿಒ ಕಚೇರಿ ಮಂಜೂರಾತಿಯಾಗಿದೆ. ಮುಂದಿನ ದಿನಗಲ್ಲಿ ಅದು ಪೂರ್ಣ ಪ್ರಮಾಣದ ಆರ್‍ಟಿಒ ಕಚೇರಿಯಾಗಿ ಪರಿವರ್ತನೆಯಾಗಲಿದೆ ಎಂದರು.
ಈಗಾಗಲೇ ಕಾಮಗಾರಿ ಪ್ರಗತಿ ಹಂತದಲ್ಲಿರುವ ಮಿನಿ ವಿಧಾನ ಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, 100 ಹಾಸಿಗೆಯ ಸಮುದಾಯ ಆಸ್ಪತ್ರೆ, ಪ್ರವಾಸಿ ಮಂದಿರ, ಮೆಸ್ಕಾಂ ಕಚೇರಿ, ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯು ಶೀಘ್ರದಲ್ಲೇ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಇದನ್ನು ನೆರವೇರಿಸಲಾಗುವುದು ಎಂದ ಸಚಿವರು ಸೌಹಾರ್ದ, ಸಾಮರಸ್ಯದ ಕೊಂಡಿಯಾಗಿರುವ ಅಜಿಲಮೊಗರು ದರ್ಗಾ ಹಾಗೂ ಕಡೇಶ್ವಲ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿಗೆ ‘ಸೌಹಾರ್ದ ಸೇತುವೆ’ ನಿರ್ಮಾಣಕ್ಕೆ 31 ಕೋಟಿ ರೂಪಾಯಿ ಮಂಜೂರಾತಿಯಾಗಿದೆ ಎಂದು ಘೋಷಣೆ ಮಾಡಿದರು.

ಚಪ್ಪಲಿಯಲ್ಲಿ ಹೊಡೆಯಿರಿ: ಸವಿಂಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‍ರವರ ಬಗ್ಗೆ ಅವಮಾನಕರ ರೀತಿಯ ಹೇಳಿಕೆ ಅಥವಾ ಟೀಕೆ ಮಾಡುವವರಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಹೇಳಿದ ಸಚಿವ ಯು.ಟಿ.ಖಾದರ್, ಭಾರತದ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅಂಬೇಡ್ಕರ್‍ರವರು ಮೂಲ ಕಾರಣ ಕರ್ತರಾಗಿದ್ದಾರೆ. ಅವರ ಬಗ್ಗೆ ಕೀಳು ಮಟ್ಟದ ಅವಮಾನಕಾರಿ ಹೇಳಿಕೆ ಹಾಗೂ ಟೀಕೆಯನ್ನು ಸಹಿಸಲು ಎಂದಿಗೂ ಸಾಧ್ಯವಿಲ್ಲ ಎಂದರು.

ಮುಂದೆಯೂ ಸಿದ್ದರಾಮಯ್ಯರವರೇ ಸಿಎಂ: ಅಧಿಕಾರಕ್ಕೆ ಬರುವ ಮೊದಲೇ ರಸ್ತೆಯಲ್ಲಿ ಕಚ್ಚಾಡುವವರು ಅಧಿಕಾರಕ್ಕೆ ಬಂದಮೇಲೆ ಏನು ಮಾಡಿಯರು ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಸಚಿವ ಖಾದರ್, 2018ಕ್ಕೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಎಚ್.ಆಂಜನೇಯರವರು ಸಮಾಜ ಕಲಾಣ್ಯ ಸಚಿವ. ರಮಾನಾಥ ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೇ ಮುಂದುವರಿಯುವುದು ಖಚಿತ ಎಂದು ಭವಿಷ್ಯ ನುಡಿಯುತ್ತಿದ್ದಂತೆ ವೇದಿಕೆಯಲ್ಲಿ ಆಸಿನರಾಗಿದ್ದ ಸಚಿವ ಆಂಜನೇಯರವರು ತಕ್ಷಣ ಪ್ರತಿಕ್ರಿಯಿಸಿ ಯು.ಟಿ.ಖಾದರ್ ಆಹಾರ ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ಸಮಾರಂಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ತಾಪಂ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ್ ಜೈನ್, ರವೀಂದ್ರ ಕಂಬಳಿ, ಶೇಖರ್ ಕುಕ್ಕೇರಿ, ಮಮತಾ ಗಟ್ಟಿ, ಜಯಶ್ರೀ ಕೋಡಂದೂರು, ಮಂಜುಳಾ ಮಾವೆ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪದ್ಮನಾಭ ನರಿಂಗಾನ, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್, ಲಕ್ಕಪ್ಪ ಬೆಂಗಳೂರು, ಮಾಜಿ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ|| ಜಿ. ಸಂತೋಷ್ ಕುಮಾರ್, ಯೋಜನಾ ಸಮನ್ವಯಾಧಿಕಾರಿ ಡಾ| ಬಿ. ಎಸ್.ಹೇಮಲತಾ, ಬಂಟ್ವಾಳ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾಪಂ ನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ, ಮುಖ್ಯಾಧಿಕಾರಿ ಸುಧಾಕರ್ ಎಚ್. ಉಪಸ್ಥಿತರಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ನಿರ್ಮಿತಿ ಕೇಂದ್ರದ ಅಧಿಕಾರಿ ರಾಜೇಂದ್ರ ಕಲ್ಬಾವಿ ವಂದಿಸಿದರು. ರಾಜೀವ ಕಕ್ಯೆಪದವು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *