ಮೂಡುಬಿದಿರೆ: ಭಾರತವು ವಿಶ್ವದಲ್ಲಿಯೇ ಒಂದು ಬಲಿಷ್ಠ ಅರ್ಥವ್ಯವಸ್ಥೆಯನ್ನು ಹೊಂದಿದ್ದು, ದೇಶದಲ್ಲಿ ವಿಪರೀತ ನಗರೀಕರಣದ ದುಷ್ಪರಿಣಾಮಗಳಾದ ಆರ್ಥಿಕ ಅಸಮಾನತೆ ಮತ್ತು ಪರಿಸರ ನಾಶದ ಕುರಿತು ಸೂಕ್ತ ಅಧ್ಯಯನ ಮಾಡುವ ಅಗತ್ಯವಿದೆ ಎಂದು ನಿಟ್ಟೆ ಜಸ್ಟಿಸ್ ಕೆ ಎಸ್ ಹೆಗ್ಡೆ ಆಡಳಿತ ಸಂಸ್ಥೆಯ ಅರ್ಥಶಾಸ್ತ್ರ ಪ್ರಾಧ್ಯಾಪಕ, ಕರ್ನಾಟಕ ಸರ್ಕಾರದ ಯೋಜನಾ ಮಂಡಳಿಯ ವಿಶ್ರಾಂತ ಸದಸ್ಯ ಡಾ.ಜಿ ವಿ ಜೋಶಿ ಎಂದು ಹೇಳಿದರು.
ಶ್ರೀ ಮಹಾವೀರ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟದ ಸಹಯೋಗದೊಂದಿಗೆ `ಭೂಮಿ ಅರ್ಥವ್ಯವಸ್ಥೆ: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ಆಯೋಜಿಸಲಾದ ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯ ಸಮಾರೋಪ ಭಾಷಣದಲ್ಲಿ ಮಾತನಾಡುತ್ತಾ, ಪ್ರಚಲಿತ ಸನ್ನಿವೇಶದಲ್ಲಿ ಭೂಮಿಯ ದುರ್ಬಳಕೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ತೀವ್ರಗತಿಯಲ್ಲಿ ನಡೆಯುತ್ತಿದೆ. ಜಪಾನ್, ಮಲೇಶಿಯಾ, ತೈವಾನ್ ಮುಂತಾದ ವಿದೇಶಿ ರಾಷ್ಟ್ರಗಳಲ್ಲಿಯೂ ಭೂಮಿಯ ಅಸರ್ಮಕ ನಿರ್ವಹಣೆ ಕಂಡು ಬರುತ್ತಿದ್ದು, ಈ ಕುರಿತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾದ ವಿಶ್ಲೇಷಣೆ ನಡೆಸಲು ಇದು ಸಕಾಲವಾಗಿದೆ ಎಂದು ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ ಜಯಕುಮಾರ್ ಶೆಟ್ಟಿ ಮತ್ತು ಮಂಗಳೂರಿನ ಬೆಸೆಂಟ್ ಸಂಜೆ ಕಾಲೇಜಿನಪ್ರಾಂಶುಪಾಲ ಡಾ. ಲಕ್ಷ್ಮೀನಾರಾಣ ಭಟ್ ಸಂಪಾದಿಸಿರುವ ಅರ್ಥಶಾಸ್ತ್ರ ಪುಸ್ತಕಗಳ ಅನಾವರಣ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಶ್ವೇತಲತಾ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು..
ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಾಮನ ಬಾಳಿಗ ಅಧ್ಯಕ್ಷತೆವಹಿಸಿದ್ದರು. ಶ್ರೀಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷ ಪ್ರೊ.ಚಂದ್ರ ಸ್ವಾಗತಿಸಿದರು. ವಿಚಾರಗೋಷ್ಠಿಯ ಸಹಸಂಚಾಲಕಿ ವಿಜಯಲಕ್ಷ್ಮೀ ಆಚಾರ್ಯ ರಾಷ್ಟ್ರೀಯ ವಿಚಾರಗೋಷ್ಠಿಯ ಎರಡು ದಿನಗಳಲ್ಲಿ ನಡೆದ ಕಲಾಪಗಳ ಕುರಿತು ವಿವರ ನೀಡಿದರು. ವಿಚಾರಗೋಷ್ಠಿಯ ಸಂಚಾಲಕ ಪ್ರೊ. ರಾಧಾಕೃಷ್ಣ ಶೆಟ್ಟಿ ವಂದಿಸಿದರು. ಕಾಲೇಜಿನ ಹಿರಿಯ ಗ್ರಂಥಪಾಲಕಿ ನಳಿನಿ ಕೆ ಕಾರ್ಯಕ್ರಮ ನಿರೂಪಿಸಿದರು.
