ಬಂಟ್ವಾಳ: ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ (ನಿ) ಪುತ್ತೂರು ಇದರ 9ನೇ ಶಾಖೆಯನ್ನು ಬಿ.ಸಿ.ರೋಡಿನ ತಾಲೂಕು ಕಚೇರಿ ಎದುರು ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ವಿತ್ತೀಯ ಸಂಸ್ಥೆಗಳು ಗುಡಿ ಕೈಗಾರಿಕೆಗಳಿಗೆ ಸಹಾಯ ನೀಡುವ ವ್ಯವಸ್ಥೆ ಹೊಂದಿರುವುದು ಶ್ಲಾಘನೀಯ. ಇದು ಜಿಲ್ಲಾ ಮಟ್ಟದಲ್ಲಿ ಪ್ರಗತಿ ಕಾಣಲಿ ಎಂದು ಶುಭ ಹಾರೈಸಿದರು. ಕುಲಾಲ ಸಮುದಾಯದ ಸಹಾಯಕ್ಕೆ ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.
ಆರಂಭದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪೋಜ್ವಲನ ಮಾಡಿದರು.ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಣ್ಣಿನಲ್ಲಿ ಮಾಡಿದ ಪಾತ್ರೆ ಸಹಿತ ವಿವಿಧ ವಸ್ತುಗಳು ಕೇವಲ ಅಲಂಕಾರಿಕವಲ್ಲದೆ, ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮ. ಅದರ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡುವುದರ ಜೊತೆಗೆ ಸಂಘವನ್ನೂ ರಚಿಸಿ ಸಾಲಸೌಲಭ್ಯಗಳನ್ನು ನೀಡುವ ಮೂಲಕ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ತಮ್ಮ ಮನೆಗಳಲ್ಲಿ ಮಣ್ಣಿನ ಪಾತ್ರೆಗಳನ್ನು ಬಳಸುವುದರೊಂದಿಗೆ ಇತರರಿಗೂ ಇದರ ಮಹತ್ವ ಸಾರುವಂಥ ಅಭಿಯಾನವೊಂದನ್ನು ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ವಹಿಸಿದ್ದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಸಮಾಜ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸುರೇಶ್, ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಕಟ್ಟಡ ಮಾಲಕಿ ಯಮುನಾ, ಹಿರಿಯರಾದ ಬಿ.ಎಸ್.ಕುಲಾಲ್ ಉಪಸ್ಥಿತರಿದ್ದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಹರೀಶ ಕಾರಿಂಜ ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕ ಎಚ್. ಪದ್ಮಕುಮಾರ್ ವಂದಿಸಿದರು. ಕಲಾವಿದ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಸಹಕಾರ ಸಂಘದ ಸಿಬ್ಬಂದಿ ರಮೇಶ್ ಬಿ ಅವರು ಸ್ಥಳದಲ್ಲೇ ಮಣ್ಣಿನ ಕಲಾಕೃತಿ ರಚಿಸುವ ಪ್ರಾತ್ಯಕ್ಷಿಕೆ ನೆರವೇರಿಸಿದರು. ಅದಾದ ಬಳಿಕ ಬಂಟ್ವಾಳದ ಕುಂಭೋದರಿ ಯಕ್ಷಬಳಗದ ಸದಸ್ಯರು ಸುದರ್ಶನ ಗರ್ವಭಂಗ ಎಂಬ ಕಥಾಭಾಗವನ್ನು ಆಡಿತೋರಿಸಿದರು.