ಬಂಟ್ವಾಳ: ವಾಹನ ಸಂಚಾರ ಮಾತ್ರವಲ್ಲದೆ ನಡೆದಾಡಲೂ ಅಯೋಗ್ಯವಾಗಿದ್ದ ಮೇರೆಮಜಲು ಗ್ರಾಮದ ಅಬ್ಬೆಟ್ಟು –ಕಳ್ಳಿಮಾರ್ ರಸ್ತೆಗೆ ಕೊನೆಗೂ ಡಾಮರೀಕರಣದ ಭಾಗ್ಯ ಲಭಿಸಿದೆ. ಹಲವು ವರ್ಷಗಳ ಇಲ್ಲಿನ ನಾಗರೀಕರ ಬೇಡಿಕೆಗೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಸ್ಪಂದಿಸಿದ್ದು ತಕ್ಷಣ 30 ಲಕ್ಷ ರುಪಾಯಿ ಅನುದಾನ ಬಿಡಗಡೆಗೊಳಿಸಿ ಮಳೆಗಾಲ ಮುಗಿದ ಕೂಡಲೇ ರಸ್ತೆ ಡಾಮಾರೀಕರಣ ಕಾಮಗಾರಿ ಆರಂಭಗೊಳ್ಳಲಿದೆ.

ಮೇರೆಮಜಲು ಗ್ರಾ.ಪಂ. ವ್ಯಾಪ್ತಿಯ ಅಬ್ಬೆಟ್ಟುವಿನಿಂದ ಕಳ್ಳಿಮಾರ್ ಸಂಪರ್ಕದ ಸುಮಾರು 1.3 ಕಿ. ಮೀ. ಉದ್ದದ ರಸ್ತೆ ಸಂಪೂರ್ಣವಾಗಿ ಹಾನಿಗೀಡಾಗಿದ್ದು ವಾಹನ ಸಂಚಾರವೇ ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ರಸ್ತೆಯ ಅಲ್ಲಲ್ಲಿ ಕೆಸರು ತುಂಬಿಕೊಂಡು ವಾಹನಗಳ ಚಕ್ರಗಳು ಸಿಲುಕಿಕೊಂಡರೆ ಅಲ್ಲೇ ಹೂತು ಹೋಗುತ್ತವೆ. ಈ ಬಗ್ಗೆ ಸ್ಥಳೀಯರು ಈ ಹಿಂದೆ ಹಲವು ಬಾರಿ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಸ್ಥಳೀಯ ಹಿರಿಯ ನಾಗರೀಕರು ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ತಕ್ಷಣ ಸ್ಪಂದಿಸಿ 30 ಲಕ್ಷ ಅನುದಾನವನ್ನು ಸಚಿವರು ಬಿಡುಗಡೆಗೊಳಿಸಿದ್ದಾರೆ. ಶನಿವಾರ ಅಬೆಟ್ಟುವಿಗೆ ಭೇಟಿ ನೀಡಿದ ಸಚಿವ ಖಾದರ್ ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದು ಹಲವು ವರ್ಷಗಳ ಬೇಡಿಕೆ ಈಡೇರಲಿದೆ ಎನ್ನುವ ಭರವಸೆಯನ್ನು ನಾಗರೀಕರಿಗೆ ನೀಡಿದ್ದಾರೆ.
ಈ ಸಂದರ್ಭ ಸಚಿವ ಯು.ಟಿ.ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿ ಮೇರಮಜಲು, ಪಕ್ಕಲಪಾದೆ, ಬಡ್ಡೂರು ಸಂಪರ್ಕ ರಸ್ತೆಯ ಸಂಪೂರ್ಣ ಕಾಂಕ್ರೀಟಿಕರಣ ಹಾಗೂ ಹೊಸ ಸೇತುವೆ ನಿರ್ಮಾಣಕ್ಕೆ 2.5 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಅಬೆಟ್ಟು- ಕಳ್ಳಿಮಾರ್ ಸಂಪರ್ಕದ ರಸ್ತೆಗೂ 30 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಮಳೆಗಾಲ ಮುಗಿದ ಕೂಡಲೇ ಕೆಲಸ ಪ್ರಾರಂಭವಾಗಲಿದೆ ಎಂದರು. ಈ ಭಾಗದಲ್ಲಿ ಹಿಂದೆ ಹಲವು ಮಂದಿ ಶಾಸಕರು, ಸಂಸದರು ಇದ್ದರೂ ಕೂಡ ಈವರೆಗೆ ಜನರ ಮೂಲಭೂತ ಬೇಡಿಕೆಯೇ ಈಡೇರಿಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರೀಕರು ಇದ್ದು ಅವರ ಬೇಡಿಕೆಗೆ ಸ್ಪಂದಿಸಿ ಈ ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಮಂಗಳೂರು ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೋಳಿಯಾರು, ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್, ಮೇರಮಜಲು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಯೋಗೀಶ್ ಪ್ರಭು, ವೃಂದ ಪೂಜಾರಿ, ಫ್ರಾನ್ಸಿಸ್, ಮಾಜಿ ಸದಸ್ಯ ಅನಿಲ್, ಸುನೀಲ್ ಕೃಷ್ಣಪ್ಪ, ಲೂಯಿಸ್, ಪಿಡಬ್ಲ್ಯುಡಿ ಎಂಜಿನಿಯರ್ ಹಾಜರಿದ್ದರು.