ಬಂಟ್ವಾಳ:ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯನ್ನು ಅಗೆದಿದ್ದರೂ ಈವರೆಗೆ ಅಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಾಣ ಮಾಡದಿರುವುದರಿಂದ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಎದುರಿನ ರಸ್ತೆ ಜಲಾವೃತ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಎದುರಿನ ರಸ್ತೆಯನ್ನು ಕಳೆದ ಬೇಸಿಗೆಯಲ್ಲಿ ಅಗೆದು ಅಗಲೀಕರಣಗೊಳಿಸಲಾಗಿದೆ. ಆ ನಂತರ ಅಗಲೀಕರಣ ಮಾಡಿದ ಜಾಗಕ್ಕೆ ಡಾಂಬರೀಕರಣ ಮಾಡದೆ ಹಾಗೆಯೇ ಬಿಡಲಾಗಿದೆ. ಅಲ್ಲದೆ ಅಗಲೀಕರಣದ ವೇಳೆ ಇಲ್ಲಿ ಇದ್ದ ಚರಂಡಿಯನ್ನು ಮುಚ್ಚಲಾಗಿದಯಾದರೂ ಹೊಸದಾಗಿ ಚರಂಡಿ ನಿರ್ಮಿಸಲಾಗಿಲ್ಲ. ಕಳೆದ ವರ್ಷದ ಮಳೆಗಾಲದಲ್ಲಿಯೂ ಇಲ್ಲಿನ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ವರ್ಷವಾದರೂ ಇಲ್ಲಿನ ಸಮಸ್ಯೆ ಬಗೆಹರಿಯಬಹುದು ಎಂಬ ಭರವಸೆ ಜನರಲ್ಲಿ ಇತ್ತು. ಆದರೆ ಪುರಸಭೆ ಇಲ್ಲಿನ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ನರಿಕೊಂಬು ಕಡೆಗೆ ಸಂಚಾರಿಸುವ ರಸ್ತೆಯ ಅಂಚು ಸಂಪೂರ್ಣ ಹಾಳಾಗಿದೆ. ಇಲ್ಲೇ ಪಕ್ಕದಲ್ಲ ಸಡಿಲ ಮಣ್ಣು ತುಂಬಿಹೋಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡವಿದ್ದು, ಶಾರದಾ ಪ್ರಾಥಮಿಕ ಶಾಲೆಯ ಎದುರು ಹೆದ್ದಾರಿ ಕಡೆಯೂ ಹೊಂಡವಿದೆ. ನರಿಕೊಂಬು ಕಡೆಯಿಂದ ಬರುವ ವಾಹನಗಳು ಎಡಕ್ಕೆ ಮೇಲ್ಕಾರ್ ಕಡೆ ತಿರುಗುವ ಜಾಗದಲ್ಲೂ ಕೆರೆ, ಬಲಕ್ಕೆ ತಿರುಗುವಾಗಲೂ ಕೆರೆಯನ್ನು ನೋಡುವಂಥ ಸನ್ನಿವೇಶ. ಇದಕ್ಕೆ ಸಂಪೂರ್ಣ ಪರಿಹಾರ ದೊರಕಬೇಕಾದರೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯಬೇಕು. ಅಲ್ಲಿಯವರೆಗೆ ನಾಗರಿಕ ಸಹಿಸಿಕೊಳ್ಳಬೇಕು.