ಬಂಟ್ವ್ವಾಳ:ತಾಲ್ಲೂಕಿನ ಕೊಯಿಲ-ಪಂಜಿಕಲ್ಲು ಗ್ರಾಮ ಸಂಪರ್ಕಿಸುವ ರಸ್ತೆಯು ಕಳೆದ ಎರಡೂವೆರ ವರ್ಷಗಳ ಹಿಂದೆಯಷ್ಟೇ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಡಾಂಬರೀಕರಣಗೊಂಡಿದ್ದು, ಇದರಲ್ಲಿ ಪಾಂಡವರಗುಡ್ಡೆ-ಕೊಯಿಲ ಇಳಿಜಾರು ರಸ್ತೆಯಲ್ಲಿ ಬಾಕಿ ಉಳಿದಿದ್ದ ನೂರು ಮೀಟರ್ ರಸ್ತೆ ಮಳೆಗೆ ಸಂಪೂರ್ಣ ಕೆಸರುಗದ್ದೆಯಾಗಿ ಪರಿವರ್ತನೆಗೊಂಡಿದೆ.
ಕಳೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಈ ಬಾಕಿ ಉಳಿದಿರುವ ನೂರು ಮೀ ಉದ್ದದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿಪೂಜೆ ನೆರವೇರಿಸಿ ಅನುದಾನ ಮೀಸಲಿಟ್ಟಿದ್ದಾರೆ.12btl-Koila

ಆದರೆ ಮಳೆಗಾಲ ಆರಂಭಗೊಳ್ಳುವ ತನಕ ಮೌನವಾಗಿದ್ದ ಗುತ್ತಿಗೆದಾರರು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಒಂದು ಲೋಡ್ ಮರಳು ತಂದು ರಸ್ತೆ ಬದಿ ರಾಶಿ ಹಾಕುವ ಮೂಲಕ ಸ್ಥಳೀ ನಾಗರಿಕರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಸಿದ್ದಾರೆ. ಕಳೆದ ವರ್ಷ ಈ ರಸ್ತೆಗೆ ಸ್ಥಳೀಯರು ಸ್ವತಃ ಖರ್ಚಿನಲ್ಲಿ ಕೆಂಪು ಕಲ್ಲು ಹಾಸುವ ಮೂಲಕ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಇನ್ನೊಂದೆಡೆ ಈ ರಸ್ತೆಯ ಒಂದು ಬದಿಯಲ್ಲಿ ಈಗಾಗಲೇ ‘ಬಹು ಗ್ರಾಮ ಕುಡಿಯುವ ನೀರಿನ ಯೋಜನೆ’ಗೆ ಪೈಪ್ ಅಳವಡಿಸುವ ನೆಪದಲ್ಲಿ ಅಗೆದು ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹದಗೆಟ್ಟ ರಸ್ತೆಯಲ್ಲಿ ಅಪಾರ ಮಂದಿ ಶಾಲಾ ವಿದ್ಯಾರ್ಥಿಗಳು ಕಾಲು ಜಾರಿ ಬಿದ್ದು ಕೆಸರಿನ ಸ್ನಾನ ಮಾಡುವಂತಾಗಿದ್ದು, ಈಗಾಗಲೇ ಮಳೆಗೆ ಇಲ್ಲಿನ ತಡೆಗೋಡೆಯೊಂದು ರಸ್ತೆಗೆ ಕುಸಿದು ಬಿದ್ದಿದೆ. ಇದರಿಂದಾಗಿ ಈ ಕೆಸರುಮಯ ರಸ್ತೆಯಲ್ಲಿ ದ್ವಿಚಕ್ರ ಮತ್ತು ರಿಕ್ಷಾ ಸಹಿತ ಯಾವುದೇ ಲಘು ವಾಹನ ಸಂಚಾರ ಅಘೋಷಿತ ಬಂದ್ ಆಗಿದೆ.ಈ ನಡುವೆ ಕಾಂಕ್ರಿಟೀಕರಣ ಕಾಮಗಾರಿ ತ್ವರಿತವಾಗಿ ಆರಂಭಗೊಳ್ಳದಂತೆ ತಡೆಯುವಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಇದರಿಂದಾಗಿ ಶೀಘ್ರವೇ ಕಾಮಗಾರಿ ಆರಂಭಗೊಳಿಸದಿದ್ದಲ್ಲಿ ಇಲ್ಲಿ ರಾಶಿ ಹಾಕಿರುವ ಮರಳನ್ನು ರಸ್ತೆಯುದ್ದಕ್ಕೂ ಸುರಿದು ಈ ಹಿಂದಿನಂತೆಯೇ ಕೆಂಪು ಕಲ್ಲು ಹಾಸುವುದಾಗಿ ಸ್ಥಳೀಯ ಮುಖಂಡ ಸತೀಶ್ ಕುಮಾರ್ ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *