ಬಂಟ್ವಾಳ: ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಏಕಪಕ್ಷೀಯ ವರ್ತನೆ ಮತ್ತು ನಿರ್ಲಕ್ಷ್ಯದ ಜೊತೆಗೆ ರಾಜ್ಯ ಸರ್ಕಾರದ ಇಬ್ಬಗೆ ನೀತಿ ಹಾಗೂ ಒತ್ತಡದಿಂದಾಗಿ ಕಲ್ಲಡ್ಕದಲ್ಲಿ ಈಚೆಗೆ ನಡೆದ ಸರಣಿ ಘರ್ಷಣೆ ಬಳಿಕ ಅನಗತ್ಯವಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ನಷ್ಟ ಉಂಟಾಗಲು ಪ್ರಮುಖ ಕಾರಣ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿರುವ ಎಸ್ಪಿ ಭೂಷಣ್ ಜಿ.ಬೊರಸೆ ಅವರೊಂದಿಗೆ ಶನಿವಾರ ಮಧ್ಯಾಹ್ನ ಕಲ್ಲಡ್ಕ ಘರ್ಷಣೆ ಪ್ರಕರಣ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಬಿ.ಸಿ.ರೋಡ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೇ. 26ರಂದು ನಡೆದ ಪ್ರಥಮ ಘರ್ಷಣೆ ಮತ್ತು ಕಲ್ಲು ತೂರಾಟ ಘಟನೆ ಮರುದಿನ ಕೆಲವೊಂದು ಗೂಂಡಾಗಳು ಅಂಗಡಿ ಮುಂಗಟ್ಟು ಬಂದ್ ನಡೆಸುತ್ತಿರುವುದನ್ನು ತಡೆಯಲು ಅಂದು ಸ್ಥಳದಲ್ಲೇ ಇದ್ದ ಎಸ್ಪಿ ಭೂಷಣ್ ಜಿ.ಬೊರಸೆ ಅವರಿಗೆ ನಿರ್ದೇಶನ ನೀಡುವಂತೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ನಾನು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ಆಗ್ರಹಿಸಿದ್ದೆವು. ಆದರೆ ಸರ್ಕಾರ ಮತ್ತು ಇಲ್ಲಿನ ಮಂತ್ರಿವರ್ಯರ ಒತ್ತಡದಿಂದ ಇಲಾಖೆ ಅದನ್ನು ನಿರ್ಲಕ್ಷಿಸಿದೆ. ಇದರಿಂದಾಗಿ ಮತ್ತೆ ಜೂ.13ರಂದು ಘರ್ಷಣೆ ಮರುಕಳಿಸಿದೆ ಎಂದು ಅವರು ಟೀಕಿಸಿದರು.

17btl-Karandlaje
ಕಲ್ಲಡ್ಕದಲ್ಲಿ ಶ್ರೀರಾಮ ಮಂದಿರ ಮತ್ತು ಸ್ವತಃ ಪೊಲೀಸ್ ಠಾಣಾಧಿಕಾರಿ ಮತ್ತಿತರರ ಮೇಲೆಯೇ ಕಲ್ಲೆಸೆಯುವ ಮಟ್ಟಕ್ಕೆ ಇಳಿದಿರುವ ಮುಸ್ಲಿಂ ಮತಾಂಧ ಶಕ್ತಿಗಳನ್ನು ಬಂಧಿಸುವ ಬದಲಾಗಿ ಅಂದಿನ ಕೃತ್ಯದಲ್ಲಿ ಭಾಗಿಯಾಗದ ಕೆಲವೊಂದು ಹಿಂದೂ ಯುವಕರನ್ನು ಪೊಲೀಸರು ಪೂರ್ವಾಗ್ರಹಪೀಡಿತರಂತೆ ಟಾರ್ಗೆಟ್ ಮಾಡುತ್ತಿದ್ದಾರೆ.
ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಮತ್ತು ಮೆಲ್ಕಾರ್ ಪವನ್‍ರಾಜ್ ಇವರನ್ನು ಚಿಕಿತ್ಸೆಗಾಗಿ ದಾಖಲಿಸಿರುವ ಪುತ್ತೂರು ಮತ್ತು ಮಂಗಳೂರು ಖಾಸಗಿ ಆಸ್ಪತ್ರೆಗೆ ತಾನು ಇಂದು ಭೇಟಿ ನೀಡಿ ಮಾತುಕತೆ ನಡೆಸಿದ್ದು, ಇವರ ಹತ್ಯೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸುವ ಬಗ್ಗೆ ಪೊಲೀಸರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಆದರೆ ಕಲ್ಲಡ್ಕದ ಮಿಥುನ್ ಸಿಕ್ಕಿದಲ್ಲಿ ಆತನನ್ನು ಎನ್‍ಕೌಂಟರ್ ಮಾಡುವುದಾಗಿ ಇಲ್ಲಿನ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಬೆದರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಕಲ್ಲಡ್ಕದ ಮಿಥುನ್ ತಂದೆ ನಾರಾಯಣ ಪೂಜಾರಿ ಮತ್ತು ಯತಿನ್ ತಂದೆ ಕೋಟಿ ಪೂಜಾರಿ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನೆಪದಲ್ಲಿ ಶನಿವಾರ ಕೂಡಿ ಹಾಕಿದ್ದಾರೆ. ಇವರನ್ನು ತಕ್ಷಣವೇ ಬಿಡುಗಡೆಗೊಳಿಸದಿದ್ದಲ್ಲಿ ತಾನು ಇಲ್ಲೇ ಧರಣಿ ಕೂರುವುದಾಗಿ ಎಚ್ಚರಿಸಿದ ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ಅವರು ವಿವರಿಸಿದರು.
ಇನ್ನೊಂದೆಡೆ ತಾಲ್ಲೂಕಿನ ಕನ್ಯಾನದಲ್ಲಿ ಮಾಲತಿ ಎಂಬ ಮಹಿಳೆಗೆ ಒಕ್ಕಲೆಬ್ಬಿಸುವ ನೆಪದಲ್ಲಿ ಮುಸ್ಲಿಂ ಮತಾಂಧರು ನಡೆಸಿದ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಜಾಮೀನು ಪಡೆಯುವತನಕ ಸಂತ್ರಸ್ತ ಮಹಿಳೆಯನ್ನು ಪೊಲೀಸರು ತಮ್ಮ ಜೀಪಿನಲ್ಲಿ ಕೂರಿಸಿ ದಿನವಿಡೀ ಸುತ್ತಾಡಿರುವುದು ಪೊಲೀಸರ ಇಬ್ಬಗೆ ನೀತಿ ಸಾಬೀತಾಗಿದೆ. ಮುಸ್ಲಿಮರಿಗೆ ರಕ್ಷಣೆ ನೀಡುವ ನೆಪದಲ್ಲಿ ಪೊಲೀಸರು ಮತ್ತು ಸರ್ಕಾರ ಇಬ್ಬಗೆ ನೀತಿ ಪ್ರದರ್ಶಿಸುತ್ತಿದ್ದು, ಇನ್ನು ಮುಂದಕ್ಕೆ ಹಿಂದೂಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ಅವರು ಎಚ್ಚರಿಸಿದರು.
24ರಂದು ಪ್ರತಿಭಟನೆ:
ಜಿಲ್ಲೆಯಲ್ಲಿ ಕಾಶ್ಮೀರ ಮಾದರಿ ರಾಜಕೀಯ ಪ್ರೇರಿತ ಹಿಂಸಾಚಾರಕ್ಕೆ ಕುಮ್ಮಕ್ಕು ಮತ್ತು ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಇದೇ 24ರಂದು ಬೆಳಿಗ್ಗೆ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ತಿಳಿಸಿದರು.
ಸುದ್ದಿಗೋೀಷ್ಠಿಯಲ್ಲಿ ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಪ್ರಮುಖರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಉಮನಾಥ ಕೊಟ್ಯಾನ್, ಬ್ರಿಜೇಶ್ ಚೌಟ, ಕಿರಣ್ ಕುಮಾರ್, ದಿನೇಶ್ ಅಮ್ಟೂರು, ಸುರೇಶ್ ಶೆಟ್ಟಿ ಗುರ್ಮೆ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಹರೀಶ್ ಪೂಂಜಾ, ವಜ್ರನಾಥ್ ಕಲ್ಲಡ್ಕ, ರಮಾನಾಥ ರಾಯಿ ಮತ್ತಿತರರರು ಇದ್ದರು.
—

By suddi9

Leave a Reply

Your email address will not be published. Required fields are marked *