ಬಂಟ್ವಾಳ: ಕೇಂದ್ರದಲ್ಲಿ ಸಮರ್ಥ ಪ್ರಧಾನಿ ನರೇಂದ್ರ ಮೋದಿಗೆ ದೊರೆತ ಜನಬೆಂಬಲ ಮಾದರಿಯಲ್ಲಿ ರಾಜ್ಯದಲ್ಲಿ ಕೂಡಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವರ ನಾಯಕತ್ವಕ್ಕೆ ಜನತೆ ಹಾತೊರೆಯುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯವಾಗಿ ಮೂಡಿ ಬರಲಿದೆ. ಇನ್ನೊಂದೆಡೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ನ ದರ್ಪ ಮತ್ತು ದೌರ್ಜನ್ಯದಿಂದ ಬೇಸತ್ತು ಬಿಜೆಪಿಗೆ ಸೇರ್ಪಡೆಗೊಳ್ಳಲು ಹಲವಾರು ಮಂದಿ ಹಾತೊರೆಯುತ್ತಿದ್ದಾರೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ಉಳಿಪಾಡಿಗುತ್ತು ಹೇಳಿದ್ದಾರೆ. 
ತಾಲ್ಲೂಕಿನ ರಾಯಿ ಪೇಟೆ ಅಮೃತ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಸಂಜೆ ಶುಭಾರಂಭಗೊಂಡ ನೂತನ ಬಿಜೆಪಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಹಿರಿಯ ಬಿಜೆಪಿ ಕಾರ್ಯಕರ್ತರಾದ ಆನಂದ ಟೈಲರ್, ಕೆ.ರವೀಂದ್ರ ರೈ, ವಾಸುದೇವ ಸಪಲ್ಯ, ಜಿ.ಲಕ್ಷ್ಮೀನಾರಾಯಣ ಗೌಡ ಇವರು ದೀಪ ಪ್ರಜ್ವಲನ ನೆರವೇರಿಸಿದರು.
ವಿಧಾನಸಭೆ ಮಾಜಿ ಉಪ ಸಭಾಪತಿ ಎನ್.ಯೋಗೀಶ ಭಟ್, ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ, ವಕ್ತಾರ ಜಿತೇಂದ್ರ ಎಸ್.ಕೊಟ್ಟಾರಿ ಮಾತನಾಡಿ, ರಾಜ್ಯದಲ್ಲಿ ಕೂಡಾ ಕೇರಳ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಜೆಪಿ ಮತ್ತು ಸಂಘ ಪರಿವಾರವನ್ನು ದಮನಿಸಲು ಮುಂದಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಈಗಾಗಲೇ 20ಕ್ಕೂ ಮಿಕ್ಕಿ ಮಂದಿ ಹತ್ಯೆ ನಡೆಸಲಾಗಿದ್ದು, ಈ ಜಿಲ್ಲೆಯಲ್ಲಿ ಕೂಡಾ ಕಾಂಗ್ರೆಸ್ಸಿನ ಇಬ್ಬರು ಸಚಿವರು ಇದೇ ಹಾದಿ ಹಿಡಿದಿದ್ದಾರೆ ಎಂದು ಆರೋಪಿಸಿದರು. 
ಇಲ್ಲಿನ ಸ್ಥಳೀಯ ನಿವಾಸಿಗಳಾದ ನವನೀತ ಪೂಜಾರಿ ಸಾಲುಕೋಡಿ, ತುಕಾರಾಮ ಪೂಜಾರಿ ಸಾಲುಕೋಡಿ, ಸುಮದರ ಪೂಜಾರಿ ಕೈರೋಳಿ, ನಾರಾಯಣ ಪೂಜಾರಿ ಸಾಲುಕೋಡಿ, ನಾಗೇಶ ಪೂಜಾರಿ ದಾಸರಕೋಡಿ, ಅಶ್ಮಿತಾ ಪೂಜಾರಿ ಮಾವಂತೂರು, ಶ್ರೀಧರ ಗೌಡ ಮತ್ತು ಸುನಿತಾ ಗೌಡ ದಂಪತಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಇದೇ ವೇಳೆ ನಡೆದ ವನಮಹೋತ್ಸವ ಮತ್ತು ಉಚಿತ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಅಪಾರ ಮಂದಿ ಪಾಲ್ಗೊಂಡರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪ್ರಮುಖರಾದ ಉದಯ ಕುಮಾರ್ ರಾವ್, ರತ್ನಕುಮಾರ್ ಚೌಟ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ವಸಂತ ಕುಮಾರ್ ಅಣ್ಣಳಿಕೆ, ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಂತೋಷ್ ಕುಮಾರ್ ಬೆಟ್ಟು, ವಸಂತ ಗೌಡ ಮುದ್ದಾಜೆ, ಮಧುಕರ ಬಂಗೇರ, ಗಂಗಾಧರ ಪಿಲ್ಕಾಜೆ, ಕೆ.ಪರಮೇಶ್ವರ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷರಾದ ಹರೀಶ ಆಚಾರ್ಯ, ಇಂದಿರಾ ಮಧುಕರ ಬಂಗೇರ ಮತ್ತಿತರರು ಇದ್ದರು. ಸದಸ್ಯ ಡೊಂಬಯ ಅರಳ ಸ್ವಾಗತಿಸಿ, ವಂದಿಸಿದರು.