ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಗುಡ್ಡೆ ಎಂಬಲ್ಲಿ ಕಳೆದ ಎರಡು ತಿಂಗಳಿನಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದು, ಇದರಿಂದಾಗಿ 80ಕ್ಕೂ ಅಧಿಕ ಕುಟುಂಬಗಳು ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಆರೋಪಿಸಿ ಇರುವೈಲು ದೇವರಗುಡ್ಡೆ ಗ್ರಾಮಸ್ಥರು ಗುರುವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ, ಪಂಚಾಯಿತಿ ಅಧ್ಯಕ್ಷೆ, ಪಿಡಿಒ, ನೀರು ಸರಬರಾಜು ಸಮಿತಿಯ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ಸದಸ್ಯ ಶಿವಪ್ಪ ಸನಿಲ್ ಮಾಧ್ಯಮದವರೊಂದಿಗೆ ಮಾತನಾಡಿ, ನೀರು ಕಮಿಟಿಯ ಅಧ್ಯಕ್ಷರು ಜನರ ಬೇಡಿಕೆಗೆ ಸ್ಪಂದಿಸದೇ ಇರುವುದರಿಂದ ದೇವರಗುಡ್ಡೆ ಪರಿಸರದ ಜನರು ಕಷ್ಟಪಡುವಂತಾಗಿದೆ. ಪಂಚಾಯಿತಿ ನಿರ್ಣಯದ ಪ್ರಕಾರ ಒಂದು ವರ್ಷದಲ್ಲಿ ನೀರು ಕಮಿಟಿ ಅಧ್ಯಕ್ಷರು ಬದಲಾಗಬೇಕಾಗಿದ್ದರೂ ಬದಲಾಗಿಲ್ಲ. ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಒದಗಿಸಬೇಕು ಎನ್ನುವ ಉದ್ದೇಶದಿಂದ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. ಗ್ರಾಪಂ ಅಧ್ಯಕ್ಷರು, ಪಿಡಿಒ ಇದನ್ನು ಗಂಭೀರವಾಗಿ ಪರಿಗಣಿಸಿ, ಜನರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪಂಚಾಯಿತಿ ಮಾಜಿ ಅಧ್ಯಕ್ಷೆ ಜಾನಕಿ, ಸದಸ್ಯ ಜಯರಾಮ್ ಬಂಗೇರ, ಮಾಜಿ ಸದಸ್ಯ ಕುಮಾರ್, ಆನಂದ ಪೂಜಾರಿ, ಶೀನ ನಾಯ್ಕ್, ದಯಾನಂದ ಪೂಜಾರಿ, ಪ್ರಶಾಂತ್ ಅಮೀನ್ ಸೇರಿದಂತೆ ದೇವರಗುಡ್ಡೆ ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷೆ ನವೀನಾ, ನೀರು ಸಮಿತಿಯ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಪಿಡಿಒ ಯಶವಂತ್ ಅವರನ್ನು ತರಾಟೆ ತೆಗೆದುಕೊಂಡರು.
ಎರಡು ತಿಂಗಳ ನೀರು ಸರಬರಾಜಿನ ಹಣ ಪಾವತಿ ಮಾಡುವುದು ಬೇಡ. ಗ್ರಾಮಸ್ಥರ ಬೇಡಿಕೆಯನ್ನು ಕ್ರೀಯಾ ಯೋಜನೆಯಲ್ಲಿಟ್ಟು, ಅನುದಾನ ಮಂಜೂರಾದ ಕೂಡಲೇ ಕೆಲಸ ಮಾಡಿಕೊಡಲಾಗುವುದು ಎಂದು ಅಧ್ಯಕ್ಷರು ಹಾಗೂ ಪಿಡಿಒ ಸಮಜಾಯಿಸಿದರು.