ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದೇ ಮೂಲ ಉದ್ದೇಶ ಎನ್ನದೇ ಪರೀಕ್ಷೆಗೆ ಹಾಜರಾಗಿ ಅಭ್ಯಸಿಸಿ ಬರೆಯುವುದೇ ಮುಖ್ಯ ಗುರಿಯಾಗಿಸಿಕೊಂಡಾಗ ಮಾತ್ರ ಬಯಸಿದ ಕೆಲಸ ಸಾರ್ಥಕವಾಗಲು ಸಾಧ್ಯ ಎಂದು ಬಂಟ್ವಾಳ ತಾಲೂಕು ಪಮಚಾಯತ್ ಸದಸ್ಯ ಪ್ರಭಾಕರ ಪ್ರಭು ಹೇಳಿದರು. ಅವರು ಸಿದ್ದಕಟ್ಟೆ ಪ್ರಥಮ ದರ್ಜೆ ಕಾಲೇಜುನಲ್ಲಿ ಉದ್ಯೋಗ ಭರವಸೆ ಕೋಶ, ಐಕ್ಯೂಎಸಿ ಮತ್ತು ರೋಟರಿ ಸಮುದಾಯ ದಳ ಸಿದ್ದಕಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರ್ಜಿ ಸಲ್ಲಿಕೆ, ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸಿದ್ದಕಟ್ಟೆ ರೋಟರಿ ಸಮುದಾಯ ದಳದ ಅಧ್ಯಕ್ಷ ವಾಸುದೇವ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಆತಂಕಕ್ಕೆ ಒಳಗಾಗದೆ ಸಮರ್ಥವಾಗಿ ಪರಿಶ್ರಮಿಸಿದಾಗ ಯಶಸ್ಸು ಸಿಗುವುದು ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಭಾರ ಪ್ರಾಂಶುಪಾಲರಾದ ಪ್ರೊ.ಸೌಮ್ಯ ಎಚ್.ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಹನುಮಂತಯ್ಯ, ಉಪನ್ಯಾಸಕರಾದ ಪಾವನಿ, ಸುಂದರೇಶ್, ವಿನಯ್, ರಂಗನಾಥ್ ಉಪಸ್ಥಿತರಿದ್ದರು. ಉದ್ಯೋಗ ಭರವಸೆ ಕೋಶದ ಸಂಚಾಲಕ ಶ್ರೀನಿವಾಸ್ ಧನ್ಯವಾದ ನೀಡಿದರು.