ಬಂಟ್ವಾಳ:ಬಿ.ಮೂಡ ಗ್ರಾಮದ ಮಫತ್‍ಲಾಲ್ ವಸತಿ ಬಡಾವಣೆಯಲ್ಲಿ ಅತಿಕ್ರಮಣ ಮತ್ತು ಖಾಸಗಿ ಸ್ಥಳದಲ್ಲಿ ಸರಕಾರದ ಅನುದಾನವನ್ನು ದುರುಪಯೋಗಪಡಿಸಿರುವ ದೂರಿಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಂಟ್ವಾಳ ಪುರಸಭೆಯ ವಿಪಕ್ಷ ಬಿಜೆಪಿ ಸದಸ್ಯರು ಅಕ್ಟೋಬರ್ ಮೊದಲವಾರದಲ್ಲಿ ಬಂಟ್ವಾಳಕ್ಕಾಗಮಿಸುವ ಮುಖ್ಯಮಂತ್ರಿಯವರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತಂತೆ ಸದಸ್ಯ ದೇವದಾಸ ಶೆಟ್ಟಿ ಅವರು ಜಿಲ್ಲಾಧಿಕಾರಿ ಡಾ.ಜಗದೀ ಶ್ ಅವರಿಗೆ ಖುದ್ದು ಲಿಖಿತ ಪತ್ರವನ್ನು ರವಾನಿಸಿದ್ದಾರೆ. ಈ ಹಗರಣದ ಬಗ್ಗೆ ಪರಸಭಾ ಕಚೇರಿಗಾಗಮಿಸಿದ ವೇಳೆ ತಮ್ಮನ್ನು ಮುಖತ: ಭೇಟಿಯಾಗಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಲಿಖಿತ ದೂರು ನೀಡಿ, ಹಲವು ತಿಂಗಳಾದರೂ ತಾವು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನ್ಯಾಯ ಕೋರಿ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಸದಸ್ಯರಾದ ಗೋವಿಂದ ಪ್ರಭು, ಭಾಸ್ಕರ್, ಸುಗುಣ ಕಿಣಿ, ಸಂಧ್ಯಾ ನಾಯ್ಕ ಹಾಗೂ ತಾನು ಸೇರಿ ಪ್ರತಿಭಟನೆ ನಡೆಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಹಸ್ತಾಂತರವಾಗಲಿಲ್ಲ:
ಮಫತ್‍ಲಾಲ್ ವಸತಿ ಬಡಾವಣೆಯಲ್ಲಿ ಉದ್ಯಾನವನಕ್ಕಾಗಿ 1.28 ಎಕರೆ ಮತ್ತು ರಸ್ತೆಗಾಗಿ 4.50 ಎಕರೆ ಮೀಸಲಿರಿಸಿ ಮೂಲ ನಕಾಶೆಯಲ್ಲಿ ತೋರಿಸಲಾಗಿದ್ದು, ವಾಸ್ತವದಲ್ಲಿ ಮೀಸಲಿರಿಸಿದ ಸ್ಥಳ ನಿಗದಿತ ಪ್ರಮಾಣದಲ್ಲಿರುವುದಿಲ್ಲ. ಹಾಗೆಯೇ ಈ ಸ್ಥಳ ಪುರಸಭೆಗೆ ಕೂಡ ಈ ತನಕ ಹಸ್ತಾಂತರವಾಗಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ದೇವದಾಸ ಶೆಟ್ಟಿ ಅವರು, ವಸತಿ ಬಡಾವಣೆಯ ರಸ್ತೆಗೆ ಪುರಸಭೆ 28 ಲಕ್ಷ ರೂ.ವೆಚ್ಚದಲ್ಲಿ ಡಾಮಾರೀಕರಣಗೊಳಿಸಿದ್ದು, ಖಾಸಗಿ ಸ್ಥಳಕ್ಕೆ ಸರಕಾರದ ಅನುದಾನ ಬಳಸಿ ದುರ್ಬಳಕೆ ಮಾಡಲಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ.
ವಿಶೇಷವೆಂದರೆ ಮಫತ್‍ಲಾಲ್ ಲೇಔಟ್ ಬಳಿ ಎಂದು ಕ್ರಿಯಾಯೋಜನೆಯಲ್ಲಿ ದಾಖಲಿಸಿ ವಸತಿ ಬಡಾವಣೆಯ ಒಳಭಾಗ ಖಾಸಗಿ ಸ್ಥಳದಲ್ಲಿ ಕಾಮಗಾರಿ ನಡೆಸುವ ಮೂಲಕ ವಂಚಿಸಲಾಗಿದೆ ಎಂದು ದೂರಲಾಗಿದೆ. ಈ ಹಿಂದೆಯೂ ಟ್ರೀಪಾರ್ಕ್ ಉದ್ಘಾಟನೆ ವೇಳೆ ರಸ್ತೆಯೊಂದರ ಗುಂಡಿ ಮುಚ್ಚಲು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಿಜೆಪಿ ನೀಡಿತ್ತು. ಮುಖ್ಯಮಂತ್ರಿ ಅವರ ಕಾರ್ಯಕ್ರಮದ ಹಿಂದಿನ ರಾತೋರಾತ್ರಿ ಗುಂಡಿ ಮುಚ್ಚಲಾಗಿತ್ತು.
ಇದೀಗ ಮತ್ತೊಮ್ಮೆ ವಿವಾದಿತ ಮಫತ್‍ಲಾಲ್ ವಸತಿ ಬಡಾವಣೆಯ ಖಾಸಗಿ ಜಮೀನಿಗೆ ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿರುವ ಆರೋಪದಲ್ಲಿ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬರುವ ವೇಳೆ ಬಿಜೆಪಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡುವ ಮೂಲಕ ಪ್ರತಿಭಟನೆಯ ಬಿಸಿ ಎದುರಿಸುವಂತಾಗಿದೆ.

By suddi9

Leave a Reply

Your email address will not be published. Required fields are marked *