ಬಂಟ್ವಾಳ : ಜಿಲ್ಲೆಯಲ್ಲಿ ನಡೆದ ಯಾವುದೇ ಮಾನವ ಹತ್ಯೆಯಲ್ಲಿ ಕಾಂಗ್ರೆಸ್ನ ಕೈವಾಡವಿಲ್ಲ. ಹತ್ಯೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಮತ, ಧರ್ಮ, ದ್ವೇಷದ ಅಮಲಿನಲ್ಲಿ ಯಾರು ಹತ್ಯೆ ನಡೆಸುತ್ತಿದ್ದಾರೆ ಅನ್ನುವುದು ಜಿಲ್ಲೆಯ ಜನತೆಗೆ ಈಗ ಸ್ಪಷ್ಟವಾಗಿದೆ. ಮಾನವ ಜೀವದಲ್ಲಿ ಚೆಲ್ಲಾಟ ನಡೆಸುತ್ತಿರುವವರಿಗೆ ತಕ್ಕ ಪಾಠ ಕಲಿಸಲು ಪ್ರಜ್ಞಾವಂತ ಸಮಾಜ ಸಿದ್ಧರಾಗಬೇಕಾಗಿದೆ ಎಂದು ರಾಜ್ಯ ಅರಣ್ಯ, ಪರಿಸರ, ಜೀವಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಗುರುವಾರ ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯಲ್ಲಿ ನಡೆದ ಬೂತು ಅಧ್ಯಕ್ಷರುಗಳು ಹಾಗೂ ಏಜೆಂಟರ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸರಕಾರ ಮಾಡಿರುವ ಅಭಿವೃದ್ಧಿಯನ್ನು ಸಹಿಸಲಾಗದೆ, ಅಭಿವೃದ್ಧಿಯ ಮೂಲಕ ನಮ್ಮನ್ನು ಎದುರಿಸಲಾಗದ ಬಿಜೆಪಿಗರು ಅಪಪ್ರಚಾರದ ಮೂಲಕ ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಅಂತಹ ಅಪಪ್ರಚಾರಕ್ಕೆ ಉತ್ತರ ಕೊಡಲು ಕಾರ್ಯಕರ್ತರು ಸಿದ್ಧರಾಗಬೇಕು. ಜನರ ಮುಂದೆ ಸತ್ಯ ಹೇಳಲು ಹಿಂಜರಿಯಬಾರದು. ನಮ್ಮ ಸಾಧನೆ ಮತ್ತು ಸತ್ಯದ ಹಾದಿಯೇ ನಮಗೆ ಶ್ರೀ ರಕ್ಷೆಯಾಗಲಿದೆ ಎಂದು ರೈ ಹೇಳಿದರು.
ಅಪಪ್ರಚಾರವೇ ಸಾಧನೆ :
ರಮಾನಾಥ ರೈ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ ಬಿಜೆಪಿಗರು ಬೈಕ್ ರ್ಯಾಲಿ ನಡೆಸುತ್ತಾರೆ. ಆದರೆ ನಾನೇಕೆ ರಾಜೀನಾಮೆ ಕೊಡಬೇಕೆಂದು ಕೇಳಿದರೆ ಅವರಲ್ಲೇ ಉತ್ತರವಿಲ್ಲ. ಈಗ ನನ್ನ ತಪ್ಪುಗಳನ್ನು ಹುಡುಕಲು ಆರಂಭಿಸಿದ್ದಾರೆ. ಇನ್ನು ಸಾವಿರ ವರ್ಷವಾದರೂ ಇವರಿಗೆ ನನ್ನ ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲ. ಆ ರೀತಿಯಲ್ಲಿ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ಜನ ಸೇವೆ ಮಾಡಿದ ತೃಪ್ತಿ ನನಗಿದೆ. ನನ್ನ ರಾಜೀನಾಮೆ ಕೇಳಬೇಕಿದ್ದರೆ ನನ್ನ ಮತದಾರರು ಕೇಳಬೇಕೇ ವಿನಃ ಇವರಿಗೆ ನೈತಿಕತೆ ಇಲ್ಲ ಎಂದು ಸಚಿವರು ಕರ್ನಾಟಕ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿ ಬಡವರ ಪಾಲಿಗೆ ಆಶಾ ಕಿರಣವಾಗಿದೆ. ಆದರೆ ಕೇಂದ್ರ ಸರಕಾರ ಬಡವರಿಗೆ ವಂಚಿಸಿ ಕೈಗಾರಿಕೋದ್ಯಮಿಗಳನ್ನು ಬೆಳೆಸುತ್ತಿದೆ ಎಂದರು.
ಪಕ್ಷದ ವೀಕ್ಷಕ ರಾಜಕುಮಾರ್ ಮಾತನಾಡಿ ರಮಾನಾಥ ರೈಯವರ ರಾಜೀನಾಮೆ ಕೇಳುವುದು ಬಿಡಿ ಅವರ ಹೆಸರು ಹೇಳುವ ಯೋಗ್ಯತೆಯೂ ಬಿಜೆಪಿಗರಿಗೆ ಇಲ್ಲ. ಸರಳ ಸಜ್ಜನಿಕೆಯಿಂದ ರಾಜಕೀಯ ಬದುಕು ನಡೆಸುತ್ತಾ ಬಂದ ರೈಯವರು ಏನೆಂಬುದು ಕ್ಷೇತ್ರದ ಮಾದರಿ ಅಭಿವೃದ್ಧಿಯನ್ನು ಕಂಡ ಜನತೆಗೆ ಸ್ಪಷ್ಟವಾಗಿ ಗೊತ್ತಿದೆ ಎಂದರು. ಪಕ್ಷದ ಪ್ರಮುಖರಾದ ಬಿ. ಎಚ್. ಖಾದರ್, ಶಾಹುಲ್ ಹಮೀದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಪಿಯುಸ್ ಎಲ್. ರೋಡ್ರಿಗಸ್, ಸದಾಶಿವ ಬಂಗೇರ, ಸುದರ್ಶನ್ ಜೈನ್, ಧನಲಕ್ಷ್ಮೀ ಸಿ. ಬಂಗೇರ, ಉಮಾನಾಥ ಶೆಟ್ಟಿ, ವಾಸು ಪೂಜಾರಿ, ಗಂಗಾಧರ ಮಂಡಾಡಿ, ಸಂಪತ್ ಕುಮಾರ್ ಶೆಟ್ಟಿ, ಜನಾರ್ಧನ ಚಂಡ್ತಿಮಾರು, ಜಗದೀಶ್ ಕೊೈಲ ಮೊದಲಾದವರಿದ್ದರು