ಬಂಟ್ವಾಳ: ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರು ಡಿ.12ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ ಮಾಡಲು ಹೊರಟಿರುವ ಸಾಮರಸ್ಯ ನಡಿಗೆಯ ಮೂಲಕ ಯಾವ ಜನತೆಗೆ ಯಾವ ಸಂದೇಶವನ್ನು ನೀಡಲು ಹೊರಟಿದ್ದಾರೆ? ಎಂದು ಬಿ.ಜಿ.ಪಿ ರಾಜ್ಯ ಸಹ ವಕ್ತಾರೆ ಶ್ರೀಮತಿ ಸುಲೋಚನಾ ಜಿ. ಕೆ. ಭಟ್ ಪ್ರಶ್ನಿಸಿದ್ದಾರೆ.

ಸಾಮರಸ್ಯ ನಡಿಗೆಗೆ ಪಕ್ಷ ಮುಖ್ಯ ಅಲ್ಲ ಜಿಲ್ಲೆಯ ಸಾಮರಸ್ಯವೇ ಮುಖ್ಯ ಅನ್ನುವ ರೈಗಳಿಗೆ ಶರತ್ ಮಡಿವಾಳ ಹತ್ಯೆ, ಕಲ್ಲಡ್ಕ ಗಲಭೆ ಸಂದರ್ಭ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರು, ಎಲ್ಲಾ ಧಾರ್ಮಿಕ ನಾಯಕರು, ಸಾಮಾಜಿಕ ಮುಖಂಡರನ್ನು ಒಟ್ಟು ಸೇರಿಸಿ ಜಿಲ್ಲೆಯ ಸಾಮರಸ್ಯ ಉಳಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದಾಗಿತ್ತು. ಬದಲಾಗಿ ನಾಲ್ಕು ಗೋಡೆಗಳ ಮದ್ಯೆ ಕುಳಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ರವರನ್ನು ಯಾಕೆÉ ಬಂಧಿಸಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುವಾಗ ಸಾಮರಸ್ಯದ ನೆನಪಾಗಲಿಲ್ಲ. ಬಡಮಕ್ಕಳ ಅನ್ನ ಕಸಿಯುವಾಗ, ಶರತ್ ಮಡಿವಾಳನ ಹತ್ಯೆಯ ನಿಜವಾದ ಆರೋಪಿಗಳನ್ನು ಇನ್ನೂ ಬಂಧಿಸದಿದ್ದಾಗ ಸಾಮರಸ್ಯದ ನೆನಪಾಗಲಿಲ್ಲ.

ಇಂದು ಸಮಾಜದ ಸಾಮರಸ್ಯವನ್ನು ಕದಡುವ ರೀತಿ ಹೇಳಿಕೆ ನೀಡುವ, ಈ ದೇಶದ ಪ್ರಧಾನಿಯವರ ಬಗ್ಗೆ ಅಗೌರವದ ಹೇಳಿಕೆ ನೀಡುವ, ಹಿಂದು ಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವ ಪ್ರಕಾಶ್ ರೈ ಯಂತಹ ಮೂಲಭೂತವಾದಿಯನ್ನು ಆಹ್ವಾನಿಸಿ, ದಕ್ಷಿಣಕನ್ನಡ ಜಿಲ್ಲೆಗೆ ಬಹುದೊಡ್ಡ ಸಾಮರಸ್ಯದ ಕೊಡುಗೆಯನ್ನು ನೀಡಲು ಹೊರಟಿರುವುದು ವಿಪರ್ಯಾಸವೇ ಸರಿ.

ದನಕಳ್ಳರಿಗೆ ಮರಳು ದಂಧೆಕೋರರಿಗೆ ಅಭಯ ಹಸ್ತ ನೀಡುತ್ತಿರುವ ರಮಾನಾಥ ರೈಯವರ ನೇತೃತ್ವದ ಸಾಮರಸ್ಯದ ಮಾತುಗಳು ಬೂತದ ಬಾಯಲ್ಲಿ ಭಗವದ್ಗೀತೆ ಅನ್ನುವಂತಾಗಿದೆ. ಸಂಘ ಪರಿವಾರಕ್ಕೆ, ಕೋಮುವಾದಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಸಾಮರಸ್ಯ ನಡಿಗೆ ಎನ್ನುವ ಉಸ್ತುವಾರಿ ಸಚಿವರಿಗೆ ಮುಂದಿನ ದಿನಗಳಲ್ಲಿ ಜನರೇ ಸರಿಯಾದ ಉತ್ತರವನ್ನು ನೀಡುತ್ತಾರೆ ಎಂದು ಶ್ರೀಮತಿ ಸುಲೋಚನಾ ಜಿ. ಕೆ. ಭಟ್ ತಿಳಿಸಿದರು

By suddi9

Leave a Reply

Your email address will not be published. Required fields are marked *