ಬಂಟ್ವಾಳ: ರಮಾನಾಥ ರೈ ಸೆಕ್ಯುಲರ್ ಅಲ್ಲ. ಅವರು ನ್ಯೂಕ್ಲಿಯರ್ ಬಾಂಬ್ ಇದ್ದಂತೆ, ಅವರು ಅಧಿಕಾರದಲ್ಲಿರುವವರೆಗೂ ಜಿಲ್ಲೆಯಲ್ಲಿ ಸಾವು, ನೋವು ಸಂಭವಿಸುತ್ತಿರುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಸಜೀಪಮೂಡ ಗ್ರಾಮದ ಬೊಳ್ಳಾಯಿಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಬಂಟ್ವಾಳ ವತಿಯಿಂದ ನಡೆಯುತ್ತಿರುವ ಪರಿವರ್ತನೆಗೆ ನಮ್ಮ ನಡಿಗೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ದ ಕಿಡಿಕಾರಿದರು. ಸಚಿವ ರಮನಾಥ ರೈ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ದಿಯಾಗಿದೆ ಎನ್ನುತ್ತಾರೆ ಆದರೆ ಅವರ ಅಧಿಕಾರವಧಿಯಲ್ಲಿ ಗಲಾಟೆ, ಹತ್ಯೆಗಳ ಅಭಿವೃದ್ದಿಯಾಗಿದೆ ಎಂದು ಟೀಕಿಸಿದ ಅವರು ಅಕ್ರಮ ಮರಳು ಹಾಗೂ ಮರದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಎಸ್ಪಿ ಸುಧೀರ್ ರೆಡ್ಡಿಯವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಅವಾಚ್ಯವಾಗಿ ನಿಂದಿಸಿರುವ ರಮಾನಾಥ ರೈ ಸತ್ಯ ಪ್ರಮಾಣ ಮಾಡಲು ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರಕ್ಕೆ ಬರಲಿ ಎಂದು ಸವಾಲು ಹಾಕಿದರು. ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಮತ್ತು ಪುಣಚ ಶಾಲೆಗಳಿಗೆ ಕೊಲ್ಲೂರು ದೇವಳ ದಿಂದ ಪೂರೈಕೆಯಾಗುತ್ತಿದ್ದ ಅನ್ನದಾಸೋಹವನ್ನು ತಾನು ನಿಲ್ಲಿಸಿಲ್ಲ ಎಂದು ಸುಳ್ಳು ಹೇಳಿದ್ದು, ಈಗಾಗಲೇ ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರವನ್ನು ಬಹಿರಂಗಪಡಿಸಿದ್ದು,ಆ ಪತ್ರ ಬರೆದಿಲ್ಲ ಎಂದು ಸಚಿವ ರೈ ಅವರು ಸಾಭೀತು ಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದರು. *ಅನ್ಯಾಯದ ಸರಮಾಲೆ*: ಪ್ರತಾಪ್ ಸಿಂಹ
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ಯಾಯದ ಸರಮಾಲೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ನಡೆಯುವ ಅನ್ಯಾಯದ ಕೇಂದ್ರ ಸ್ಥಳ ಬಂಟ್ವಾಳ ಎಂದ ಅವರು ಕಾಂಗೆಸ್‌ನ ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು. ಕೆಲ ಸಂಘಟನೆಯನ್ನು ಛೂ ಬಿಟ್ಟು ಕರ್ನಾಟಕ ಬಂದ್ ಗೆ ಕರೆ ಕೊಡುವ ಮೂಲಕ ಕಾಂಗ್ರೆಸ್ ಸರಕಾರ ಹಿಂಬಾಗಿಲ ರಾಜಕಾರಣ ಮಾಡುತ್ತಿದ್ದು,ತಾಕತ್ತಿದ್ದರೆ ನೇರಾನೇರವಾಗಿ ರಾಜಕಾರಣ ಮಾಡಿ ಸವಾಲೆಸೆದರು.ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ.ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಬದಲಾವಣೆಯಾಗಲಿದ್ದು,ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ.ಬಂಟ್ವಾಳದಲ್ಲೂ ಪರಿವರ್ತನೆಯ ಗಾಳಿ ಬೀಸುತ್ತಿದ್ದು,ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ಎಂ.ಎಸ್.ಮಹಮ್ಮದ್ ಯಾರೆಂದೆ ಗೊತ್ತಿಲ್ಲ: ರಾಜೇಶ್ ನಾಯ್ಕ್ ಟಾಂಗ್ :
ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಯಾರೆಂದೆ ನನಗೆ ಗೊತ್ತಿಲ್ಲ, ಆ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದೇ ಇಲ್ಲ ಆದರೆ ಮುಂದಿನ ಜಿಪಂ ಚುನಾವಣೆಯಲ್ಲಿ ಕೊಳ್ನಾಡುವನ್ನು ಬಿಜೆಪಿ ಗೆಲವುಸಾಧಿಸಲಿದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಲಿ ಎಂದು ಪಾದಯಾತ್ರೆಯ ರೂವಾರಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಎಂ.ಎಸ್.ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾವು ರಾಷ್ಟ್ರೀಯ ಚಿಂತನೆವುಳ್ಳವರು, ಬಿಜೆಪಿ ಪಕ್ಷ ಗೆಲ್ಲಬೇಕು ಎಂಬುದೇ ನಮ್ಮ ಗುರಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲೂಪರಿವರ್ತನೆಯಾಗಬೇಕು ಬಿಜೆಪಿ ಶಾಸಕರು ಗೆದ್ದು ಕ್ಷೇತ್ರವನ್ನು ಅಭಿವೃದ್ದಿ ಪಡಿಸಬೇಕು ಎಂಬ ಕನಸು ಹೊಂದಿದ್ದೇನೆ ಕಾರ್ಯಕರ್ತರ ಅವಿರತ ಶ್ರಮದಿಂದ ಈ ಬಾರಿ ಬಂಟ್ವಾಳದಲ್ಲೂ ಪರಿವರ್ತನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಕಳೆದ ಚುನಾವಣೆಯ ಬಳಿಕವು ಬಂಟ್ವಾಳ ಕ್ಷೇತ್ರದಲ್ಲೇ ಇದ್ದು, ಉದ್ದಗಲಕ್ಕೂ ಸಂಚರಿಸಿ,ಕಾರ್ಯಕರ್ತರ ಒಡನಾಡಿಯಾಗಿ ಸಂಪರ್ಕದಲ್ಲಿದ್ದೇನೆಲ್ಲದೆಜನರ ಕಷ್ಟ-ಸುಖಕ್ಕೂ ಸ್ಪಂದಿಸಿದ್ದೇನೆ ಎಂಬುದು ಎಂ.ಎಸ್.ರಿಗೆ ಗೊತ್ತಿರಲಿ ಎಂದ ರಾಜೇಶ್ ನಾಯ್ಕ್ ರಾಜಕೀಯವನ್ನೇ ಕಸಬು ಆಗಿ ಮಾಡಿಕೊಂಡಿರುವ ಎಂ.ಎಸ್.ರಿಂದ ನಾನು ಪಾಠ ಕಲಿಯುವಂತದ್ದೇನು ಇಲ್ಲ ..ನನಗೆ ಬಿಜೆಪಿ ಗೆಲುವುದಷ್ಠೆ ಮುಖ್ಯ,ಅದಕ್ಕಾಗಿ ಈ ಪರಿವರ್ತನಾ ಯಾತ್ರೆ ಎಂದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವನೆಗೈದರು.ವೇದಿಕೆಯಲ್ಲಿ ಜಿಪಂ ಸದಸ್ಯರಾದ ರವೀಂದ್ರ ಕಂಬಳಿ,ಕಮಾಲಾಕ್ಷಿ ಪೂಜಾರಿ,ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಎಸ್ಸಿ ಮೋರ್ಛಾ ಅಧ್ಯಕ್ಷ ದಿನೇಶ್ ಅಮ್ಟೂರು,ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್,ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ,ಮಾಜಿ ತಾಪಂ ಉಪಾಧ್ಯಕ್ಷ ಆನಂದ ಶಂಭೂರು,ಕ್ಷೇತ್ರ ಸಮಿತಿ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ,ಸಜೀಪ ಮುನ್ನೂರು ಶಕ್ತಿಕೇಂದ್ರದ ಅಧ್ಯಕ್ಷ ಅರವಿಂದ ಭಟ್,ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೇಟ್ಟು,ಪಕ್ಷದ ಸ್ಥಳೀಯ ಮುಖಂಡರಾದ ಸುರೇಶ ಪೂಜಾರಿ,ಜಯಶಂಕರ ಬಾಸ್ರಿತ್ತಾಯ,ಜಗದೀಶ್ ಗಾಣಿಗ,ಅಶೋಕ ಗಟ್ಟಿ,,ಜನಾರ್ಧನ ಬೊಂಡಾಲ,ದಯಾನಂದ ಬಿ.ಎಂ.,ಪ್ರದೀಪ್ ಕುಮಾರ್ ಶೆಟ್ಟಿ ಅಡ್ಯಾರ್, ವಜ್ರನಾಭ ಕಲ್ಲಡ್ಕ, ಪುರಸಭಾ ಸದಸ್ಯ ಗೋವಿಂದ ಪ್ರಭು, ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ,ಉದಯಕುಮಾರ್ ರಾವ್ ಬಂಟ್ವಾಳ ಮೊದಲಾದವರಿದ್ದರು.
ಡ್ಯಾಂ ಸಂತ್ರಸ್ತ ರೈತರಿಗೆ ಬಿಜೆಪಿ ಬೆಂಬಲ:
ತುಂಬೆ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗಿರುವ ಜಮೀನಿನ ರೈತರಿಗೆ ಬಿಜೆಪಿ ಬೆಂಬಲ ನೀಡುವುದಾಗಿ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ ಘೋಷಿಸಿದರು. ಪರಿಹಾರ ನೀಡಿದ ಬಳಿಕ ನೀರು ನಿಲುಗಡೆ ಮಾಡುವುದು ಸಾಮಾನ್ಯ ಕ್ರಮ. ಆದರೆ ಶಾಶ್ವತ ಪರಿಹಾರ ನೀಡದೆ ಡ್ಯಾಂನಲ್ಲಿ ನೀರು ನಿಲುಗಡೆ ಮಾಡಿ ರೈತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ರೈತರ ಹೋರಾಟದೊಂದಿಗೆ ಬಿಜೆಪಿಯೂ ಕೈ ಜೋಡಿಸಲಿದೆ ಎಂದು ತಿಳಿಸಿದರು.
