ಬಳ್ಳಾರಿ: ಪ್ರಧಾನಿ ಮೋದಿ ಹಿಂದೆ ನೋಡುತ್ತ ಮುಂದೆ ದೇಶದ ಗಾಡಿ ಓಡಿಸುತ್ತಿದ್ದಾರೆ, ದೇಶದ ಭವಿಷ್ಯದ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ. ದೇಶವನ್ನು ಮುನ್ನಡೆಸುವ ಯಾವ ದೂರದೃಷ್ಟಿಯೂ ಅವರಿಗಿಲ್ಲ. ಉದ್ಯೋಗ ಸೃಷ್ಟಿಯೂ ಸೇರಿ ಅವರ ಭರವಸೆಗಳೆಲ್ಲ ಸುಳ್ಳಾಗಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಹೊಸಪೇಟೆಯ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
“ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲಿ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. ಕಾಂಗ್ರೆಸ್ ಪಕ್ಷ ಸತ್ಯದ ಪರವಾಗಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಭವಿಷ್ಯದ ಬಗ್ಗೆ ಚಿಂತನೆ ಇಲ್ಲ. ಮೋದಿ ಅವರ ಉದ್ಯೋಗ ಸೃಷ್ಟಿ ಯೋಜನೆ ಹುಸಿಯಾಗಿದೆ. ರಫೆಲ್ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ. ದೇಶವನ್ನು ಮುನ್ನಡೆಸುವ ಯಾವ ದೂರದೃಷ್ಟಿಯೂ ಮೋದಿ ಅವರಿಗಿಲ್ಲ. ಅವರು ಹಿಂದೆ ನೋಡಿಕೊಂಡು ದೇಶದ ಗಾಡಿ ಓಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಅವರೇ ನೀವು ಸಿದ್ದರಾಮಯ್ಯ ಅವರ ಬಳಿ ಬಂದು ಪಾಠ ಕಲಿಯಿರಿ. ಅವರು ಯಾವ ರೀತಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎನ್ನುವುದನ್ನು ತಿಳಿಯಿರಿ ಎಂದು ರಾಹುಲ್ ಗಾಂಧಿ ಪಾಠ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಅವರು ರಾಹುಲ್ ಗಾಂಧಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹೊಸಪೇಟೆಯಲ್ಲಿ ಯಾವುದೇ ಪಕ್ಷದ ಸಮಾವೇಶ ಈ ರೀತಿ ನಡೆದಿರಲಿಲ್ಲ. ಹಂಪಿ ವಿಜಯ ನಗರ ಅರಸರ ಜಧಾನಿಯಾಗಿತ್ತು. ಆಹೊತ್ತು ಆಳಿದ್ದ ರಾಜರುಗಳು ಇತಿಹಾಸದಲ್ಲಿ ನೆನಪು ಮಾಡುವ ಆಡಳಿತ ಕೊಟ್ಟಿದ್ದರು. ಅದೇ ರೀತಿ ಜನ ನೆನಪಿಸುವ ಆಡಳಿತವನ್ನು ನಾವು ನೀಡಿದ್ದೇವೆ. ಎಲ್ಲ ಬಡವರಿಗೂ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದರು.
ನವ ಕರ್ನಾಟಕ ನಿರ್ಮಿಸಲು ಮರಳಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿಯವರೆ ನೀವು ದೇಶದ ಪ್ರಧಾನಿಯಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದೀರಿ. ನಿಮ್ಮನ್ನು ಜನ ನಂಬುವುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕರ್ನಾಟದ ಜನ ಕಾಂಗ್ರೆಸ್ ಸರ್ಕಾರವನ್ನು ಮೆಚ್ಚಿಕೊಂಡಿದ್ದಾರೆ. ಸರ್ಕಾರದ ವಿರೋಧಿ ಅಲೆ ಎಲ್ಲಿಯೂ ಇಲ್ಲ. ಜನ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಬಯಸಿದ್ದಾರೆ. ಬಿಜೆಪಿ ಮನುಷ್ಯತ್ವ ಇಲ್ಲದ ಪಕ್ಷ . ಆ ಪಕ್ಷ ಯಾವತ್ತೂ ಅಧಿಕಾರಕ್ಕೆ ಬರಬಾರದು. ಇದಕ್ಕಾಗಿ ಬಳ್ಳಾರಿ, ಕರ್ನಾಟದ ಜನ ಸಂಕಲ್ಪ ಮಾಡಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್, ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಎಚ್.ಆಂಜನೇಯ ಮತ್ತಿತರರು ಮಾತನಾಡಿದರು.
ಶಾಸಕರಾದ ಆನಂದಸಿಂಗ್, ಬಿ.ನಾಗೇಂದ್ರ, ಭೀಮಾ ನಾಯ್ಕ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
