ಮೈಸೂರು: ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ಬೇಕಾ ಇಲ್ಲವೇ ಮಿಶನ್ ಸರ್ಕಾರ ಬೇಕಾ ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ. ಈ ಸಲವಾದರೂ ಬಿಜೆಪಿ ಗೆಲ್ಲಿಸಿ ನವಕರ್ನಾಟಕ ನಿರ್ಮಾಣಕ್ಕೆ ಸಹಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ತಮಗೆ ತೊಡಿಸಿದ ಮೈಸೂರು ಪೇಟ ತೊಟ್ಟುಕೊಂಡೇ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಮೈಸೂರಿನ ಜನರಿಗೆ ಮೋಡಿ ಮಾಡಲು ಪ್ರಯತ್ನ ಮಾಡಿದರು.
ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮ್ಮಗೆಲ್ಲಾ ನನ್ನ ನಮಸ್ಕಾರಗಳು. ಚಾಮುಂಡೇಶ್ವರಿ ಮಾತೆಗೆ ನನ್ನ ಪ್ರಣಾಮಗಳು. ಮೈಸೂರು ಅರಸರು, ಸರ್.ಎಂ.ವಿಶ್ವೇಶರಯ್ಯ, ರಾಷ್ಟ್ರಕವಿ ಕುವೆಂಪು, ಸುತ್ತೂರು ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ನನ್ನ ನಮಸ್ಕಾರಗಳು ಎಂದು ಹೇಳಿದ ಪ್ರಧಾನಿ ಮೋದಿ, ಮೈಸೂರು ರೇಶ್ಮೆ, ಮೈಸೂರು ಶ್ರೀಗಂಧ, ಮೈಸೂರು ಮಲ್ಲಿಗೆ, ಮೈಸೂರ್ಪಾಕ್ ಜಗತ್ ಪ್ರಸಿದ್ಧ ಎಂದು ಕನ್ನಡದಲ್ಲೇ ಹಾಡಿ ಹೊಗಳಿದರು.
ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ತೊಲಗಿಸಬೇಕು. ಮಿಶನ್ ಸರ್ಕಾರವನ್ನು ಗೆಲ್ಲಿಸಬೇಕು. ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಿಎಂ ತವರು ಜಿಲ್ಲೆ ಚುನಾವಣೆಗೆ ರಣಕಹಳೆ ಮೊಳಗಿಸಿದರು.
ಮೈಸೂರು ಮತ್ತು ಬೆಂಗಳೂರು ನಡುವಿನ ಜೋಡಿಹಳಿ ಮಾರ್ಗ, ವಿದ್ಯುತ್ ಚಾಲಿತ ರೈಲು ಮತ್ತು ಹಮ್ ಸಫರ್ ರೈಲಿಗೆ ಚಾಲನೆ ದೊರಕಿದೆ. ದೇಶದ ರೈಲುಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ರೈಲ್ವೆ ಬಜೆಟ್ನಲ್ಲಿ ಮಾತ್ರ ಹೊಸ ರೈಲುಗಳ ಘೋಷಣೆ ಈಗಿಲ್ಲ. ಇದು ಕೆಲಸದ ಸರ್ಕಾರ ಎಂದರು.
ಮೈಸೂರು ಪ್ರವಾಸಿ ಕೇಂದ್ರವಾಗಿದೆ. ಮೈಸೂರು ಮತ್ತು ರಾಜಸ್ಥಾನದ ನಡುವೆ ಹಮ್ ಸಫರ್ ರೈಲು ಸಂಚಾರ ಆರಂಭವಾಗಿದೆ. ಇದರಿಂದ ಮೈಸೂರು ಮತ್ತು ರಾಜಸ್ಥಾನ ನಡುವೆ ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ. ರೈಲು ಸಂಚಾರದಿಂದ ಆಟೋ ಚಾಲಕರು, , ಅಂಗಡಿಗಳು, ಪ್ರವಾಸಿ ಮಂದಿರಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಮೋದಿ ಹೇಳಿದರು.
ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ಇರುವವರೆಗೂ ಕೆಟ್ಟ ದಿನಗಳು ಇರುತ್ತವೆ. 10 ಪರ್ಸೆಂಟ್ ಸರ್ಕಾರ ಎಂದು ನಾನು ಹಿಂದೆ ಹೇಳಿದ್ದೆ. ಆದರೆ ಕೆಲವರು ನನಗೆ ಫೋನ್ ಮಾಡಿ 10 ಪರ್ಸೆಂಟ್ ಅಲ್ಲ, ಇನ್ನೂ ಜಾಸ್ತಿಯಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಕಪ್ಪವನ್ನು ಡೈರಿಯಲ್ಲಿ ಬರೆದು ಅದನ್ನು ಹರಿದು ಹಾಕುತ್ತಾರೆ ಎಂದು ಪ್ರಧಾನಿ ರಾಜ್ಯದ ಇಬ್ಬರು ಸಚಿವರ ಹೆಸರು ಹೇಳಿ ವ್ಯಂಗವಾಡಿದರು.
