ಬಂಟ್ವಾಳ:ತಾಲ್ಲೂಕಿನ ಮಂಚಿ -ಬೋಳಂತೂರು ರಸ್ತೆ ನಡುವಿನ ನಿರ್ಬೈಲು ಎಂಬಲ್ಲಿ ದಂಪತಿ ಮಾತ್ರ ಇದ್ದ ಮನೆಗೆ ನುಗ್ಗಿದ ಕಳ್ಳರು ರೂ 4.38ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಇಲ್ಲಿನ ನಿವಾಸಿ, ಪ್ರಗತಿಪರ ಕೃಷಿಕ ಶಂಕರ ನಾಯಕ್ ಅವರು ಕೃಷಿ ಜೊತೆಗೆ ಕೋಳಿ ಫಾರಂ ನಡೆಸುತ್ತಿದ್ದು, ಶನಿವಾರ ರಾತ್ರಿ ಸುಮಾರು 10 ಗಂಟೆ ಬಳಿಕ ಎಂದಿನಂತೆ ಮನೆಯಲ್ಲಿ ಮಲಗಿದ್ದರು.
ಇವರ ಪುತ್ರಿ ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಮನೆಯಲ್ಲಿ ಶಂಕರ ನಾಯಕ್ ಮತ್ತು ಅವರ ಪತ್ನಿ ಮಾತ್ರ ಇದ್ದರು. ಭಾನುವಾರ ಬೆಳಿಗ್ಗೆ ಇವರ ಪತ್ನಿ ಎಂದಿನಂತೆ ಬೇಗನೆ ಎದ್ದು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರದಿರುವುದನ್ನು ಕಂಡಾಗ ಮನೆಯ ಕೋಣೆಯಲ್ಲಿ ಕಳವು ನಡೆದಿರುವುದು ತಿಳಿದಿದೆ.
ಮನೆಯ ಹಿಂಬದಿ ಕಿಟಕಿ ಮೂಲಕ ಬಾಗಿಲಿನ ಚಿಲಕ ಸರಿಸಿ ಒಳಪ್ರವೇಶಸಿದ್ದ ಕಳ್ಳರು ಕೋಣೆಯ ಕಪಾಟಿನಲ್ಲಿದ್ದ ರೂ 50 ಸಾವಿರ ಮೊತ್ತದ ನಗದು ಮತ್ತು ರೂ 3.88 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹೆಚ್ಚುವರಿ ಎಸ್ಪಿ ಸಜಿತ್, ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ಪೊಲೀಸರು ಭಾನುವಾರ ಬೆಳಿಗ್ಗೆ ಧಾವಿಸಿ ಬಮದು ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಕರೆಸಿ ಸ್ಥಳ ಪರಿಶೀಲನೆ ನಡೆಸಿರುವುದಾಗಿ ಗ್ರಾಮಾಂತರ ಠಾಣಾಧಿಕಾರಿ ಎಂ.ಪ್ರಸನ್ನ ತಿಳಿಸಿದ್ದಾರೆ.