images68

ಭಟ್ಕಳ: ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಇವರಿಗೆ ರಾಜ್ಯದ ಅಭಿವೃದ್ಧಿಯ ಚಿಂತೆ ಇಲ್ಲ. ಹಿಂದೂ-ಮುಸ್ಲಿಮರಲ್ಲಿ ಒಡಕನ್ನುಂಟು ಮಾಡುತ್ತಾ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಅವರು ಇಲ್ಲಿನ ಇಸ್ಲಾಮಿಯಾ ಆಂಗ್ಲೊ ಉರ್ದು ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ನ ವಿಕಾಸ ಪರ್ವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಭಟ್ಕಳ ತಾಲೂಕುವೊಂದರಲ್ಲಿಯೇ 10 ಸಾವಿರ ಅತಿಕ್ರಮಣದಾರರ ಅರ್ಜಿಗಳಲ್ಲಿ 8 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇನ್ನುಳಿದ 2 ಸಾವಿರ ಅರ್ಜಿಗಳನ್ನು ಅಧಿಕಾರಿಗಳೇ ಇಟ್ಟುಕೊಂಡಿದ್ದಾರೆ. ಒಂದೆಡೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಯಾವುದೇ ಕಾರ್ಖಾನೆಗಳಿಲ್ಲ. ಇನ್ನೊಂದೆಡೆ ಇದ್ದ ಸೂರೂ ತಮ್ಮದಲ್ಲ ಎನ್ನುವ ಪ್ರಜ್ಞೆ ಜನತೆಯನ್ನು ಕಾಡುತ್ತಿರುವಾಗ ನಮ್ಮ ಸರಕಾರ ನಿಮ್ಮ ನೆರವಿಗೆ ಬರಲಿದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಮುಂಬರುವ ಚುನಾವಣೆಯಲ್ಲಿ ಈ ರಾಜ್ಯವನ್ನು ನನ್ನದೇ ಚಿಂತನೆಯೊಂದಿಗೆ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಮುಂದಿನ 5ವರ್ಷಗಳ ಅವಧಿಗೆ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

ಇತ್ತೀಚೆಗೆ ಯಾರೇ ಸತ್ತರೂ ಅವರು ಬಿಜೆಪಿ, ಭಜರಂಗದಳದ ಕಾರ್ಯಕರ್ತರು ಎನ್ನುವುದನ್ನು ರೂಢಿಸಿಕೊಂಡಿದ್ದು ಸರಕಾರವನ್ನು ನರಹಂತಕ ಸರಕಾರ ಎಂದು ದೂರುತ್ತಿದ್ದಾರೆ. ಯಡಿಯೂರಪ್ಪನವರ ಜನ ಸಂಪರ್ಕ ಯಾತ್ರೆಯನ್ನು ಟೀಕಿಸಿದ ಅವರು, ಜನರ ಪರವಾಗಿ ಅವರ ಸಮಸ್ಯೆ ಪರಿಹಾರಕ್ಕಾಗಿ ಮೆರವಣಿಗೆಯನ್ನು ಮಾಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗುಣವಂತೆಯ ಶಂಭ ಗೌಡ ಜೆಡಿಎಸ್ಗೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ರಾಜ್ಯ ಸಭಾ ಅಭ್ಯರ್ಥಿ ಬಿ.ಎಂ. ಪಾರೂಕ್, ಶಾಸಕ ಮಧು ಬಂಗಾರಪ್ಪ, ಮರಿತಿಬ್ಬೇಗೌಡ, ಬಿ.ಆರ್. ನಾಯ್ಕ, ಗಣಪಯ್ಯ ಗೌಡ, ಗಣಪತಿ ಭಟ್ಟ ಕೊರ್ಲಿಕಾನ್, ಪ್ರದೀಪ ನಾಯ್ಕ ದೇವರಬಾವಿ, ರವೀಂದ್ರನಾಥ ನಾಯ್ಕ, ಸೈಯದ್ ಮೊಹಿದ್ದೀನ್ ಅಲ್ತಾಫ್, ಮೋಹಿನಿ ನಾಯ್ಕ, ಯೋಗೇಶ ಶೆಟ್ಟಿ, ರವಿ ಶೆಟ್ಟಿ, ಗಂಗಾಧರ, ಪಾಂಡು ನಾಯ್ಕ, ವೆಂಕಟೇಶ ನಾಯ್ಕ, ಜೈನುಲ್ಲಾಬಿದೀನ್ ಪಾರೂಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *