ಮಂಗಳೂರು: ಜಿಲ್ಲೆಯಲ್ಲಿ ಗೋಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಅಮೃತಧಾರ ಗೋಶಾಲೆ ಮುಖ್ಯಸ್ಥ ರಾಜಾರಾಂ ಭಟ್ ಅವರು ಉಪವಾಸ ಕೈಬಿಟ್ಟಿದ್ದಾರೆ.
ದ.ಕ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೀಡಿದ ಭರವಸೆಗೆ ಮಣಿದು ತಾತ್ಕಾಲಿಕವಾಗಿ ಉಪವಾಸ ಅಂತ್ಯಗೊಳಿಸಿದ್ದಾರೆ. ಸುಮಾರು 9 ದಿನಗಳ ಕಾಲ ರಾಜರಾಂ ಭಟ್ ಅವರು ನಿರಶನ ಕೈಗೊಂಡಿದ್ದರು.
ಗೋದರೋಡೆಕೋರರ ಬಂಧನಕ್ಕೆ ಆಗ್ರಹಿಸಿ ಕೈರಂಗಳದ ಅಮೃತಧಾರ ಗೋಶಾಲೆಯಲ್ಲಿ ನಿರಶನ ಆರಂಭಿಸಿದ್ದರು. ಸತತ ಉಪವಾಸದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅತೀ ಶೀಘ್ರವೇ ಗೋಕಳ್ಳರ ಬಂಧನದ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರಾಜಾರಾಂ ಭಟ್ ಪೇಜಾವರ ಶ್ರೀಗಳಿಂದ ಕ್ಷೀರ ಪ್ರಸಾದ ಸ್ವೀಕರಿಸಿ ನಿರಶನ ಅಂತ್ಯಗೊಳಿಸಿದರು.
