ಕೋಲಾರ: ಕೇರಳದಲ್ಲಿ ಪತ್ತೆಯಾಗಿರುವ ಮಾರಣಾಂತಿಕ ನಿಪಾ ವೈರಸ್ ಬಗ್ಗೆ ಜಿಲ್ಲಾದ್ಯಾಂತ ಕರಪತ್ರದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಬೇಕು ಹಾಗೂ ಹೋಬಳಿಗೊಂದಂತೆ ಜಾಗೃತಿ ವಾಹನವನ್ನು ನೇಮಿಸಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್ಕುಮಾರ್ ಅವರಿಗೆ ಮನವಿ ಮಾಡಲಾಯಿತು.
ಈ ವೇಳೆ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಮಾರಣಾಂತಿಕ ನಿಪಾ ವೈರಸ್ ಕಾಯಿಲೆಗೆ ಕೇರಳದಲ್ಲಿ ಹತ್ತು ಮಂದಿ ಬಲಿಯಾಗಿದ್ದು, ಕರ್ನಾಟಕಕ್ಕೆ ಕಾಣಿಸಿಕೊಳ್ಳುವ ಮುನ್ನ ಇದರ ಮುಂಜಾಗೃತ ಕ್ರಮಗಳ ಬಗ್ಗೆ ಕರಪತ್ರದ ಮೂಲಕ ಶಾಲಾ-ಕಾಲೇಜು, ಪಂಚಾಯಿತಿ ವ್ಯಾಪ್ತಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕು, ಹೋಬಳಿ ಉಪ ಕೇಂದ್ರಗಳಲ್ಲಿ ಹೆಚ್ಚಿನ ವೈದ್ಯಾಧಿಕಾರಿಗಳನ್ನು ನೇಮಿಸ ಬೇಕು. ಈ ಕಾಯಿಲೆಗೆ ತುತ್ತಾಗುವ ರೋಗಿಗಳ ಬಗ್ಗೆ ರೋಗಿಗಳ ನಿರ್ಲಕ್ಷವಹಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾದ್ಯಕ್ಷೆ ಎ.ನಳಿನಿ, ಪವಿತ್ರ, ಈಕಂಬಳ್ಳಿ ಮಂಜುನಾಥ್, ನರಸಾಪುರ ಪುರೋಷೋತ್ತಮ್, ಕೆಂಬೋಡಿ ಕೃಷ್ಣೇಗೌಡ, ಮುರಳಿ, ಮುದುವಾಡಿ ಚಂದ್ರಪ್ಪ ಮತ್ತಿತರರಿದ್ದರು.
ಮೂಲರಪಣ್ನ: ಗ್ರಾಮಸ್ಥರು ಕಲುಷಿತ ನೀರು ಕುಡಿದ ಪರಿಣಾಮ ಮೈಮೇಲೆ ಅಲರ್ಜಿ ಕಾಣಿಸಿಕೊಂಡ ಘಟನೆ ಇಲ್ಲಿನ ಮುತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕುಡಿಯುವ ನೀರು ಒದಗಿಸುವ ಸಲುವಾಗಿ ಗ್ರಾ.ಪಂ. ವತಿಯಿಂದ ಸಮೀಪದ ಪಲ್ಗುಣಿ ನದಿಯ ನೀರನ್ನು ಕಟ್ಟೆಯೊಂದರಲ್ಲಿ ಶೇಖರಿಸಿ ಗ್ರಾಮಸ್ಥರಿಗೆ ಸರಬರಾಜು ಮಾಡುತ್ತಿತ್ತು. ಆದರೆ ಶೇಖರಿಸಿಟ್ಟ ನೀರು ಕಲುಷಿತಗೊಂಡಿದ್ದು, ಇದನ್ನು ಕುಡಿದ ಗ್ರಾಮಸ್ಥರ ಮೈಮೇಲೆ ಇದ್ದಕ್ಕಿಂದಂತೆ ತುರಿಕೆ ಕಾಣಿಸಿಕೊಂಡು ಅಲರ್ಜಿ ಆಗಿದೆ ಎಂದು ತಿಳಿದು ಬಂದಿದೆ.
ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುತ್ತೂರು ಗ್ರಾ.ಪಂ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಎಡಪದವು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕೈಕಂಬ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಎಡಪದವು ಸಮೀಪದ ಕಣ್ಣೂರಿ ದರ್ಖಾಸ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮೃತರನ್ನು ಎಡಪದವು ನೋಣಯ ಗೌಡ ಅವರ ಪುತ್ರ ಚಿದಾನಂದ ಗೌಡ (40)ಎಂದು ಗುರುತಿಸಲಾಗಿದೆ.
ಸೆಂಟ್ರಿಂಗ್ ಕಾಂಟ್ರಕ್ಟರ್ ಆಗಿ ದುಡಿಯುತ್ತಿದ್ದ ಚಿದಾನಂದ ಅವರು, ಇತ್ತಿಚೇಗೆ ವಿಪರೀತ ಕುಡಿಯುವ ಚಟಹೊಂದಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಜಪೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
