ಕೈಕಂಬ: ವಿದ್ಯಾರ್ಥಿಗಳು ಶಾಲಾ ಶಿಕ್ಷಣದೊಂದಿಗೆ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ಎಳೆವೆಯಲ್ಲೇ ಸಮಾಜ, ರಾಜ್ಯ, ದೇಶದ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಗುರುಪುರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಡಾ. ಶೆಟ್ಟಿ, ಶಿಕ್ಷಣ ಸಂಸ್ಥೆಯೊಳಗೆ ರಾಜಕೀಯ ಎಳೆದು ತರಬಾರದು. ಕೇವಲ ಕಾಂಕ್ರೀಟು ರಸ್ತೆಗಳಿಗೆ ಆದ್ಯತೆ ನೀಡುವ ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಯಕರ್ಯವಿಲ್ಲದೆ ಸೊರಗಿದ ಶಿಕ್ಷಣ ಸಂಸ್ಥೆಗಳಿಗೆ ಅಂತಹ ಸೇವೆ ಒದಗಿಸಲು ಮೀನಮೇಷ ಎಣಿಸುತ್ತಿರುವುದು ತರವಲ್ಲ.
ಶಾಲಾ ಕಾಲೇಜುಗಳಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸುವುದಾಗಿ ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದರೆ ಸಾಲದು ದೇಶಭಕ್ತನಾಗಿರಬೇಕು ಈ ರೀತಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಗಮನಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ತಂದುಕೊಟ್ಟಿರುವ ಮಾಜಿ ಶಾಸಕ ಮೊೈದಿನ್ ಬಾವ ಮಾತನಾಡುತ್ತ, ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಮುಂದೆಯೂ ಶಿಕ್ಷಣದ ಕೆಲಸದಲ್ಲಿ ಕೈಜೋಡಿಸೋಣ. ಸರ್ಕಾರವೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾಲಕಾಲಕ್ಕೆ ಸಹಾಯ ಮಾಡುತ್ತಿದೆ. ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದರು.
ಶಿಕ್ಷಣಾಸಕ್ತರ ನೆರವಿನಿಂದ ಇಲ್ಲೊಂದು ಸುಂದರ ಕಟ್ಟಡ ನಿರ್ಮಾಣವಾಗಿದೆ. ಸರ್ಕಾರಿ ಶಿಕ್ಷಣ ಸಾರ್ವಜನಿಕರ ಕೈಯಲ್ಲಿರುವ ಸಂಸ್ಥೆಯಾದ್ದರಿಂದ ಈ ಕಾಲೇಜು ಪ್ರಗತಿಯೊಂದಿಗೆ ಮುಂದಡಿ ಇಡುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉನ್ನತ ವ್ಯಕ್ತಿಗಳಾಗಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ-ನಿರ್ದೇಶಕ ನಾಗರಾಜಪ್ಪ ಅಭಿಪ್ರಾಯಪಟ್ಟರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ ಮಾತನಾಡುತ್ತ, ಕೆಲವು ವರ್ಷಗಳಿಂದ ಈ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಇದಕ್ಕೆ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದ ಕಾರಣ. ಇಲ್ಲೊಂದು ಸಭಾ ಭವನ ನಿರ್ಮಾಣವಾದಲ್ಲಿ ಸಂಸ್ಥೆಗೆ ಒಂದಷ್ಟು ಲಾಭವಾಗಲಿದೆ. ಇದಕ್ಕೆ ಸರಕಾರದ ನೆರವು ಅವಶ್ಯ ಎಂದರು.
ಈ ಸಂದರ್ಭದಲ್ಲಿ ಡಾ. ಭರತ್ ಶೆಟ್ಟಿ, ಮೊೈದಿನ್ ಬಾವ ಹಾಗೂ ಕಟ್ಟಡ ಗುತ್ತಿಗೆದಾರ ಪದ್ಮನಾಭ ಕೋಟ್ಯಾನರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲಾ ಅಭಿವೃದ್ಧಿ ರೂವಾರಿ ಪ್ರಾಂಶುಪಾಲ ವಾಸುದೇವ ಕಾಮತ್ ಪ್ರಸ್ತಾವಿಕ ಮಾತನಾಡಿ, ಗಣ್ಯರಿಗೆ ಸ್ವಾಗತ ಕೋರಿದರು. ವೇದಿಕೆಯಲ್ಲಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ತಾಪಂ ಸದಸ್ಯ ಜಿ.ಸುನಿಲ್ ,ಗ್ರಾಪಂ ಉಪಾಧ್ಯಕ್ಷ ಉದಯ ಭಟ್, ಕೂಸಪ್ಪ ಮಾಸ್ತರ್,ಪಂ ಸದಸ್ಯರಾದ ರಾಜೇಶ್ ಸುವರ್ಣ,ಜಯಲಕ್ಷ್ಮೀ, ಉಮೈ ಬಾನು, ಕಾಲೇಜು ಹಾಗೂ ಹೈಸ್ಕೂಲ್ ಶಿಕ್ಷಕರು ಉಪಸ್ಥಿತರಿದ್ದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಅಹ್ಮದ್ ಹುಸೇನ್ ಸಫೀಕ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸರ್ಕಾರ ಒದಗಿಸಿದ ಪಾದರಕ್ಷೆ ವಿತರಿಸಲಾಯಿತು. ಹೈಸ್ಕೂಲ್ ಮುಖ್ಯ ಶಿಕ್ಷಕಿ ರೂಪಾ ಈ ಕಾರ್ಯಕ್ರಮ ನಿರೂಪಿಸಿದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..


