ಕೈಕಂಬ: ಪೋಷಕರು ಶಿಕ್ಷಕರಿಂದ ವಿದ್ಯಾರ್ಥಿಗಳ ಕಲಿಕೆ, ವರ್ತನೆ ತಿಳಿದುಕೊಳ್ಳಬೇಕು ಎಂದು ಶಾಸಕ ಶಾಸಕ ಭರತ್ ಶೆಟ್ಟಿ ಹೇಳಿದರು.ಅವರು ಗಂಜಿಮಠ ಗ್ರಾಪಂ ವ್ಯಾಪ್ತಿಯ ಮಳಲಿ ಸರ್ಕಾರಿ ಅನುದಾನಿತ ಪ್ರೌಢ ಶಾಲೆಯಲ್ಲಿಶನಿವಾರ ವಿದ್ಯಾರ್ಥಿಗಳಿಗೆ ಸರ್ಕಾರ ಒದಗಿಸಿದ ಪಾದರಕ್ಷೆ ವಿತರಿಸಿ ಸಮಾರಂಭದ ಮುಖ್ಯ ಅಥಿತಿಯಾಗಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ, ಸರ್ಕಾರದ ಇಂತಹ ಯೋಜನೆಗಳು ವಿದ್ಯಾರ್ಥಿಗಳಿಂದ ಸದುಪಯೋಗವಾಗಬೇಕು. ಭವಿಷ್ಯದಲ್ಲಿ ಎಲ್ಲ ಮಕ್ಕಳ ಸತ್ಪ್ರಜೆಗಳಾಗಲು ಪ್ರಯತ್ನಿಸಬೇಕು. ಪೋಷಕರು ತಮ್ಮ ಮಕ್ಕಳ ವಿದ್ಯಾಭಾಸ ಮತ್ತು ನಡವಳಿಕೆಗಳ ಬಗ್ಗೆ ಆಗಾಗ್ಗೆ ಶಿಕ್ಷಕರಿಂದ ತಿಳಿದುಕೊಳ್ಳಬೇಕು. ಇದಕ್ಕಾಗಿ ಶಾಲೆ ಮತ್ತು ಪೋಷಕರ ಮಧ್ಯೆ ಸದಾ ಸಂವಹನ ಮುಖ್ಯ ಎಂದರು.
ದ ಕ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡುತ್ತ, ಇತರ ಕನ್ನಡ ಶಾಲೆಗಳಿಗೆ ಹೋಲಿಸಿದರೆ ಮಳಲಿ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಈಗಾಗಲೇ ಸರ್ಕಾರದಿಂದ ಅನುದಾನ ತಂದಿದ್ದೇನೆ. ಭವಿಷ್ಯದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಶಾಸಕರೊಂದಿಗೆ ಸೇರಿಕೊಂಡು ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ. ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಜೀವನ ಉಜ್ವಲವಾಗಬೇಕೆಂದು ಬಯಸಿದವ ನಾನು ಎಂದರು.
ತಾಪಂ ಸದಸ್ಯ ಸುನಿಲ್ ಪೂಜಾರಿ ಮಾತನಾಡುತ್ತ, ಖಾಸಗಿ ಶಾಲಾ ಮಕ್ಕಳಂತೆ ಸರ್ಕಾರಿ ಶಾಲಾ ಮಕ್ಕಳೂ ಶಾಲೆಗೆ ಹೋಗುವಾಗ ಶೂ ಧರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಮಾಜಿ ಸೀಎಂ ಸಿದ್ದರಾಮಯ್ಯ ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಇಂತಹ ಹಲವು ಯೋಜನೆ ಪರಿಚಯಿಸಿದ್ದಾರೆ ಎಂದರು.
ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಹಳೆ ವಿದ್ಯಾರ್ಥಿ ಭಾಸ್ಕರ್ , ಉಳಿಪಾಡಿಗುತ್ತು ಉದಯ ಆಳ್ವ ಸಂದರ್ಭೋಚಿತ ಮಾತನಾಡಿದರು. ಗ್ರಾ. ಪಂ ಸದಸ್ಯ ಮಾದವ ಕಾಜಿಲ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ನೋಣಯ ಮಳಲಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಅನುಪಮಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

