ಸುದ್ದಿ9:ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ 20 ಸೆಂಟ್ಸ್ ಜಮೀನಿನಲ್ಲಿ ಖರೀದಿದಾರರು ಹೊಸ ಮನೆ ನಿರ್ಮಿಸುವ ವೇಳೆ ಅಕ್ರಮವಾಗಿ ಬೇಲಿ ಹಾಕಿ ಜೆಸಿಬಿ ಮೂಲಕ ಮನೆ ಸುತ್ತಲೂ ಮಣ್ಣು ಅಗೆಯುವ ಮೂಲಕ ತಂಡವೊಂದು ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮಹಿಳೆ ದೂರು ಸಲ್ಲಿಸಿದ ಘಟನೆ ಶನಿವಾರ ನಡೆದಿದೆ.
ಆರೋಪಿಗಳನ್ನು ಸ್ಥಳೀಯ ನಿವಾಸಿ ದಿ.ಯೂಸುಫ್ ಎಂಬಾತನ ಪತ್ನಿ ಜಮೀಲ ಮತ್ತಿತರ ಆರು ಮಂದಿ ತಂಡ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಜಮೀನು ಖರೀದಿಸಿರುವ ಪಾಣೆಮಂಗಳೂರಿನ ನರಿಕೊಂಬು ನಿವಾಸಿ ಸತೀಶ ಸಪಲ್ಯ ಎಂಬವರ ಪತ್ನಿ ಗೀತಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಹಿನ್ನೆಲೆ: ಕಳೆದ 2011ನೇ ಏ.28ರಂದು ಇಲ್ಲಿನ ನಿವಾಸಿ ದಿ.ಅಬ್ದುಲ್ ಖಾದ್ರಿ ಬ್ಯಾರಿ ಎಂಬವರ ಪುತ್ರ ಯೂಸುಫ್ ಎಂಬಾತನು ಪಾಣೆಮಂಗಳೂರು ಸಮೀಪದ ನರಿಕೊಂಬು ನಿವಾಸಿ ಸತೀಶ ಸಪಲ್ಯ ಎಂಬವರಿಗೆ ಸರ್ವೆ ನಂ.28/9ರಲ್ಲಿ ಒಟ್ಟು 2.21ಎಕ್ರೆ ಜಮೀನಿನಲ್ಲಿ ಕೇವಲ 20 ಸೆಂಟ್ಸ್ ಜಮೀನು ಕ್ರಯಪತ್ರ ಮೂಲಕ ಮಾರಾಟ ಮಾಡಿದ್ದನು ಎನ್ನಲಾಗಿದೆ. ಇದೇ ವೇಳೆ ಆರೋಪಿ ಯೂಸುಫ್ ತನ್ನ ತಂದೆ ಅಬ್ದುಲ್ ಖಾದ್ರಿ ಬ್ಯಾರಿಗೆ ತಾನು ಒಬ್ಬನೇ ಪುತ್ರ ಎಂದು ನಕಲಿ ದಾಖಲೆ ಸೃಷ್ಟಿಸಿ ಎಲ್ಲಾ ಜಮೀನನ್ನು ತನ್ನ ಪತ್ನಿ ಜಮೀಲನ ಹೆಸರಿಗೆ ದಾನಪತ್ರ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ, ಈತನ ಮೂವರು ಸಹೋದರ ಮತ್ತು ಸಹೋದರಿಯರು ಹೀಗೆ ಒಟ್ಟು ಆರು ಮಂದಿ ಸೇರಿಕೊಂಡು ಯೂಸುಫ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಆ ಬಳಿಕ ಮತ್ತೆ ಇವರೆಲ್ಲರೂ ರಾಜಿ ಮಾಡಿಕೊಂಡು ಉಳಿಕೆ ಜಮೀನು ಹಂಚಿಕೊಂಡ ಬಳಿಕ ಯೂಸುಫ್ ತೀರಿಕೊಂಡಿದ್ದಾನೆ ಎನ್ನಲಾಗಿದೆ.
ಈ ನಡುವೆ ಸತೀಶ ಅವರು ತಾನು ಖರೀದಿಸಿದ 20 ಸೆಂಟ್ಸ್ ಜಮೀನು ಸಮತಟ್ಟುಗೊಳಿಸಿ ಹೊಸ ಮನೆ ನಿರ್ಮಿಸುತ್ತಿದ್ದು, ಉದ್ಯೋಗ ನಿಮಿತ್ತ ಗೃಹ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿ ವಿದೇಶಕ್ಕೆ ತೆರಳಿದ್ದಾರೆ. ಇದರಿಂದಾಗಿ ಜಮೀಲ ಮತ್ತು ಇತರ ಆರು ಮಂದಿ ಸೇರಿಕೊಂಡು ಸತೀಶ ನಿರ್ಮಿಸಿರುವ ಹೊಸ ಮನೆ ಪಕ್ಕದಲ್ಲಿ ಅಕ್ರಮ ಬೇಲಿ ನಿ ರ್ಮಿಸಿ ಜೆಸಿಬಿ ಮೂಲಕ ಮನೆ ಸುತ್ತಲೂ ಮಣ್ಣು ಅಗೆಯುತ್ತಾ ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ನಮ್ಮ ಜಮೀನು ಅಳತೆಗೆ ಬಂದಿದ್ದ ಭೂಮಾಪಕರನ್ನು ಕೂಡಾ ಆರೋಪಿಗಳು ವಾಪಾಸು ಕಳುಹಿಸಿದ್ದಾರೆ ಎಂದು ಆರೋಪಿಸಿ ಸತೀಶರ ಪತ್ನಿ ಗೀತಾ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿರ್ಲಕ್ಷ್ಯ ಆರೋಪ: ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಕರೆಸಿ ಎಚ್ಚರಿಕೆ ನೀಡಿ ಕೇವಲ ಮುಚ್ಚಳಿಕೆ ಬರೆಸಿಕೊಂಡಿದ್ದು, ಸ್ಥಳ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿಭಟನೆ ಎಚ್ಚರಿಕೆ: ಈ ನಡುವೆ ಪ್ರಾಮಾಣಿಕವಾಗಿ ಕ್ರಯಪತ್ರ ಮೂಲಕ ಜಮೀನು ಖರೀದಿಸಿದ ಬಳಿಕ ಗೃಹ ನಿರ್ಮಾಣ ಕಾಮಗಾರಿಗೆ ಅಡ್ಡಿ ಪಡಿಸಿದ್ದಲ್ಲದೆ ಒಂಟಿ ಮಹಿಳೆಗೆ ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗಾಣಿಗರ ಸೇವಾ ಸಂಘ ಮತ್ತು ವಿವಿಧ ಹಿಂದೂ ಸಂಘಟನೆ ಎಚ್ಚರಿಸಿವೆ.


