ಬಂಟ್ವಾಳ: ಅಡಕೆ ಮರವನ್ನು ಸರಸರನೆ ಏರುವ ನಿಷ್ಣಾತರ ಕೊರತೆ ಇರುವ ಈ ಕಾಲದಲ್ಲಿ  ಹೈಟೆಕ್ ಯಂತ್ರವೊಂದನ್ನು ನಿರ್ಮಿಸಿ ಯಶಸ್ವಿಯಾಗಿದ್ದಾರೆ ಬಂಟ್ವಾಳ ತಾಲೂಕಿನ ಪಣೋಲಿಬೈಲ್ ಸಮೀಪದ ಕೋಮಾಲಿ ಎಂಬಲ್ಲಿರುವ ಪ್ರಗತಿಪರ ಕೃಷಿಕ ಗಣಪತಿ ಭಟ್. ಪ್ರಾಯೋಗಿಕವಾಗಿ ತನ್ನ ಮನೆಯ ಸದಸ್ಯರು ಇದನ್ನು ಬಳಸಿದ ಸಂದರ್ಭ ಮಾಡಲಾದ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ   ವೈರಲ್ ಆಗಿ ಕೃಷಿಕರ ವಲಯದಲ್ಲಿ ಗಮನಸೆಳೆದಿದೆ.

9bhadake1

ದಶಕದ ಹಿಂದೆ ಅಡಕೆ ಮರ ಏರುವುದು ಸಾಮಾನ್ಯ ವಿಷಯವಾದರೂ ಇಂದು ಆ ಕೆಲಸ ಮಾಡಲು ನುರಿತ ವ್ಯಕ್ತಿಗಳು ಸಿಗುತ್ತಿಲ್ಲ . ಮರ ಹತ್ತಲು ಹಲವು ಯಂತ್ರಗಳ ಆವಿಷ್ಕಾರಗಳು ಕಾಲಕಾಲಕ್ಕೆ ನಡೆಯುತ್ತಲೇ ಇದ್ದು, ಇದಕ್ಕೊಂದು ಸೇರ್ಪಡೆ ಮರ ಹತ್ತುವ ಬೈಕ್. ಇದರ ಮೂಲ ಉದ್ದೇಶವೇ ಯಾರ ಸಹಾಯವೂ ಇಲ್ಲದೆ ಮರ ಹತ್ತುವುದು. ಸದ್ಯಕ್ಕೆ ಅಡಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯೂ ಭಟ್ ಅವರಿಗಿದೆ.              ಬೈಕ್ ನಂಥ ಸಾಧನದಲ್ಲಿ ಕುಳಿತು ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ ಮುಗೀತು. ಬರ್ರನೆ 30 ಸೆಕೆಂಡ್ ಗಳಲ್ಲಿ ನೀವು ಅಡಕೆ ಮರದ ತುದಿಯಲ್ಲಿರುತ್ತೀರಿ, ಕೆಲಸ ಮುಗಿಸಿ ಕೆಳಗಿಳಿಯಬೇಕಾದರೆ ಇಂಜಿನ್ ಆಫ್ ಮಾಡಿದರೂ ನಡೆಯುತ್ತದೆ. ಬೀಳುವ ಯಾವುದೇ ಅಪಾಯವಿಲ್ಲ.ಹಾಗೆಯೇ ಮರಕ್ಕೂ ತೊಂದರೆ ಇಲ್ಲ.
9bhadake2
ಏನಿದರ ವೈಶಿಷ್ಟ್ಯ:

ಇದು 28 ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ 2 ಸ್ಟ್ರೋಕ್ ಇಂಜಿನ್ ಇರುವ ಬೈಕ್ ಮಾದರಿಯ ಯಂತ್ರ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಡ್ರಮ್ ಹೊಂದಿದ ಬ್ರೇಕ್ ಕೂಡ ಇದೆ. ಗೇರ್ ಬಾಕ್ಸ್ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್, ಸೇಫ್ಟ್ ಬೆಲ್ಟ್ ವ್ಯವಸ್ಥೆ ಒಳಗೊಂಡಿದೆ. ಸುಮಾರು 70 ಕೆ.ಜಿ. ತೂಕವುಳ್ಳ ವ್ಯಕ್ತಿ ಇದರಲ್ಲಿ ಸಲೀಸಾಗಿ ಕುಳಿತುಕೊಳ್ಳಬಹುದು. ಎರಡೂ ಕೈಯನ್ನು ಹಿಡಿಯಲು ಹ್ಯಾಂಡಲ್, ಬೈಕ್ ನ ಹ್ಯಾಂಡ್ ಬ್ರೇಕ್ ಮಾದರಿಯಲ್ಲಿರುವ ನಿಯಂತ್ರಣ ವ್ಯವಸ್ಥೆ ಇಲ್ಲಿದೆ.

ಹೇಗೆ ಕೆಲಸ ಮಾಡುತ್ತದೆ:

ಟೂ ಸ್ಟ್ರೋಕ್ ಇಂಜಿನ್ (ಹಳೇ ಚೇತಕ್ ಸ್ಕೂಟರ್ ನಲ್ಲಿರುವಂತೆ) ಆಗಿರುವ ಕಾರಣ, ಪೆಟ್ರೋಲ್ ಮತ್ತು ಆಯಿಲ್ ಸೂಚಿನ ಪ್ರಮಾಣದಲ್ಲಿ ಹಾಕಿ ಸುಸ್ಥಿತಿಯಲ್ಲಿ ಯಂತ್ರವನ್ನು ಇಡಬೇಕು. ಬಳಿಕ ತಾವೇರುವ ಅಡಕೆ ಮರದ ಬುಡದಲ್ಲಿ ಅದನ್ನು ಸ್ಥಾಪಿಸಬೇಕು. ಇದರ ವಿನ್ಯಾಸ ಹೇಗಿದೆ ಎಂದರೆ ಯಂತ್ರವನ್ನು ಬಿಡಿಸಿ, ಅಡಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಅದಾದ ಬಳಿಕ ನಮ್ಮ ಜಾಗರೂಕತೆಗೆ ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಯಂತ್ರದಲ್ಲಿರುವ ಆಸನದಲ್ಲಿ ಕುಳಿತು, ಸ್ವಿಚ್ ಅದುಮಿದರೆ, ಬುರ್ರೆಂದು ಮೇಲಕ್ಕೇರುತ್ತಾ ಹೋಗುತ್ತದೆ. ನಿಮಗೆ ಅರ್ಧ ಜಾಗದಲ್ಲಿಯೇ ನಿಲ್ಲಿಸಬೇಕೆಂದಿದ್ದರೆ, ನಿಲ್ಲಿಸಬಹುದು, ಒಮ್ಮೆ ಕೆಳಕ್ಕೆ ಬಂದು ಮತ್ತೆ ಮೇಲಕ್ಕೆ ಹೋಗಲೂ ಬಹುದು, ಸಾಮಾನ್ಯವಾಗಿ 30 ಸೆಕೆಂಡ್ ಗಳಲ್ಲಿ ಒಂದು ಅಡಕೆ ಮರವನ್ನು ಹತ್ತಬಹುದು. ತಮ್ಮ ಕೆಲಸವನ್ನು ಮುಗಿಸಿದ ಬಳಿಕ ಯಂತ್ರದ ಬ್ರೇಕ್ ಸಹಾಯದಿಂದ ಹಾಗೆಯೇ ಕೆಳಕ್ಕಿಳಿಯಬಹುದು. ಈ ಸಂದರ್ಭ ಇಂಜಿನ್ ಆಫ್ ಆಗಿದ್ದರೂ ಪರವಾಗಿಲ್ಲ ಎನ್ನುತ್ತಾರೆ ಗಣಪತಿ ಭಟ್. ಡಬಲ್ ಬ್ರೇಕ್, ಸೇಫ್ಟ್ ಬೆಲ್ಟ್ ಇದ್ದರೆ ಮನುಷ್ಯ ಯಾವುದೆಲ್ಲ ಮರವನ್ನು ಹತ್ತುತ್ತಾನೋ ಅಲ್ಲೆಲ್ಲ ಯಂತ್ರ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು.

ಮಹಿಳೆಯರಿಗೂ ಸುಲಭ:

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಣಪತಿ ಭಟ್ ಮಗಳು ಪದವಿ ವ್ಯಾಸಂಗ ಮಾಡುತ್ತಿರುವ ಸುಪ್ರಿಯಾ ಮರವೇರುವ ಯಂತ್ರದಲ್ಲಿ ಕುಳಿತು ಸ್ವಿಚ್ ಅದುಮಿ ಮೇಲಕ್ಕೇರುವ ದೃಶ್ಯ ಹರಿದಾಡುತ್ತಿದೆ. ಕೃಷಿ ನಡೆಸುವವರು ಸ್ವತಃ ದುಡಿಯುವುದಿದ್ದರೆ, ಯಾರ ಸಹಾಯವೂ ಇಲ್ಲದೆ, ತಾವೇ ಮರವೇರಬಹುದು, ಮಹಿಳೆಯರು, ಮಕ್ಕಳಿಗೂ ಇದು ಸೇಫ್ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎಂದು ಭಟ್ ಹೇಳಿದರು.

ಯಂತ್ರಕ್ಕೆ ಬೇಡಿಕೆ:

ತನ್ನ ಸ್ವಂತ ಉಪಯೋಗಕ್ಕಾಗಿ ಮಾಡಿದ ಈ ಪ್ರಯೋಗದ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಂಡ ಕಾರಣ ಭಟ್ಟರಿಗೆ ದೂರವಾಣಿ ಕರೆಗಳ ಸುರಿಮಳೆಯೇ ಬರುತ್ತಿದೆ. ಅದನ್ನು ನೋಡಲು ದೂರದೂರುಗಳಿಂದ ಕೃಷಿಕರು ಬರುತ್ತಿದ್ದಾರೆ. ಜೊತೆಗೆ ತನಗೊಂದು ಯಂತ್ರ ನಿರ್ಮಿಸಿಕೊಡಿ ಎಂಬ ಬೇಡಿಕೆಯೂ ಬರುತ್ತಿದೆ. ಯಂತ್ರ ನಿರ್ಮಿಸಲು ಎಪ್ಪತ್ತೈದು ಸಾವಿರ ರೂ ಬೇಕು, ಬೇಡಿಕೆ ಇಟ್ಟವರಿಗೆ ಮಾಡಿ ಕೊಡುತ್ತೇನೆ ನನ್ನ ಮೂಲ ಉದ್ದೇಶ ಕೃಷಿಕರು ಕಾರ್ಮಿಕರಿಲ್ಲ ಎಂದು ಕಸುಬು ಬಿಡದೆ, ಮುನ್ನಡೆಯಲು ಸಹಕಾರಿಯಾಗಬೇಕು ಎನ್ನುವ ಗಣಪತಿ ಭಟ್, ತನ್ನ ಕೃಷಿ ಕಾರ್ಯದ ಜೊತೆ ಯಂತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ

By suddi9

Leave a Reply

Your email address will not be published. Required fields are marked *