ಮೂಡುಬಿದಿರೆ:ಮೂಡುಬಿದಿರೆಯಿಂದ ಕಟೀಲಿಗೆ ಹೊರಡುವ ಹೊರಕಾಣಿಕೆಯ ಮುಂಚಿತವಾಗಿ ಇಲ್ಲಿನ ಜನತೆ ಅಕ್ಕಿ, ತೆಂಗಿನ ಕಾಯಿ ಸಹಿತ ಹಾಳಾಗದ, ದೀರ್ಘ ಬಾಳಿಕೆ ಬರುವ ವಸ್ತುಗಳನ್ನು ಸೇವಾ ರೂಪದಲ್ಲಿ ನೀಡಬೇಕು. ಹೊರಕಾಣಿಕೆ ಮೆರವಣಿಯು ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಸರ್ವರ ಸಹಕಾರ ಅಗತ್ಯ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೂಡುಬಿದಿರೆ ಎಸ್‍ಸಿಎಸ್ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ನೇತೃತ್ವದಲ್ಲಿ ಜನವರಿ 22ರಂದು ಮೂಡುಬಿದಿರೆಯಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಯ ಪೂರ್ವಭಾವಿಯಾಗಿ ಶುಕ್ರವಾರ ಸಾಯಂಕಾಲ ಬ್ಯಾಂಕ್‍ನ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, 12.5 ಟನ್ ಟೈಗರ್ ಬ್ರ್ಯಾಂಡ್ ಅಕ್ಕಿಯನ್ನು ಸಮರ್ಪಿಸಲು ನಿರ್ಧರಿಸಿದ್ದೇವೆ. ಹೆಚ್ಚಿನ ಭಕ್ತರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸುತ್ತೇವೆ. ಆಳ್ವಾಸ್ ರಜತ ಪಲ್ಲಕಿ ಮೊದಲ್ಗೊಂಡು ಸಾಂಪ್ರದಾಯಿಕವಾಗಿ ಮೂಡುಬಿದಿರೆಯಿಂದ ಶ್ರೀಕ್ಷೇತ್ರ ಕಟೀಲಿಗೆ ಮೆರವಣಿಗೆ ನಡೆಯಲಿದೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ. ಮಾತನಾಡಿ, ಶ್ರೀಕ್ಷೇತ್ರ ಕಟೀಲು ಹಾಗೂ ಮೂಡುಬಿದಿರೆ ಧಾರ್ಮಿಕವಾಗಿ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ಇಲ್ಲಿನ ಭಕ್ತರು ತನು ಮನ ಧನದ ಮುಖೇನ ಸಂಪೂರ್ಣವಾಗಿ ಸಹಕರಿಸಬೇಕು. ದೇವಳ ಉತ್ಸವದಲ್ಲಿ ಸ್ವಯಂಸೇವಕರಾಗಿಯೂ ದುಡಿಯಬೇಕು ಎಂದು ವಿನಂತಿಸಿದರು. ಜಿಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಮೂಡುವೇಣುಪುರ ಶ್ರೀ ವೆಂಕಟರಮಣ, ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಭಾಸ್ಕರ ಎಸ್.ಕೋಟ್ಯಾನ್, ತಿಮ್ಮಯ್ಯ ಶೆಟ್ಟಿ, ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕಾಧ್ಯಕ್ಷ ದಿವಾಕರ ಶೆಟ್ಟಿ ತೋಡಾರು ಸಹಿತ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *