ಬಂಟ್ವಾಳ: ನನ್ನ ಕನಸಿನ ಯೋಜನೆಯಲ್ಲಿ ಒಂದಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಪೂರ್ಣಪ್ರಮಾಣದಲ್ಲಿ ಬಂಟ್ವಾಳ ಕ್ಷೇತ್ರದ ಜನತೆಯ ಉಪಯೋಗಕ್ಕೆ ಲಭ್ಯವಾಗಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.ಮಂಗಳವಾರ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 5 ಗ್ರಾ.ಪಂ. ವ್ಯಾಪ್ತಿಯ 38 ಜನ ವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ತನ್ನ ಸಾಮಾಜಿಕ ಬದುಕಿನಲ್ಲಿ ಅತ್ಯಂತ ಹೆಚ್ಚು ಖುಷಿ ಕೊಟ್ಟ ಯೋಜನೆ ಇದಾಗಿದ್ದು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿಗೆ ಐದು ಕುಡಿಯುವ ನೀರಿನ ಕಾಮಗಾರಿ ಯೋಜನೆ ಮಂಜೂರಾಗಿದ್ದು,ಈ ಪೈಕಿ 4 ಯೋಜನೆಗಳು ಪೂರ್ಣಪ್ರಮಾಣದಲ್ಲಿ ಜನತೆಯ ಉಪಯೋಗಕ್ಕೆ ಲಭ್ಯವಾಗಿರುವುದು ಮನಸ್ಸಿಗೂ ನೆಮ್ಮದಿ ತಂದಿದೆ ಎಂದರು.
ನನ್ನ ಅಧಿಕಾರವಧಿಯಲ್ಲಿ ಕಾರ್ಯಗಳನ್ನು ಯೋಜನೆಗಳನ್ನು ಕ್ಷೇತ್ರದಲ್ಲಿ ಮಂಜೂರು ಮಾಡಲು ಸಹಕರಿಸಿದಂತಹ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಿ ವರ್ಗಕ್ಕೆ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ 50 ವರ್ಷಗಳ ದೀರ್ಘಕಾಲಿಕ ದೂರದೃಷ್ಟಿ ಇರಿಸಿಕೊಂಡು ನಡೆಸಲಾಗಿದ್ದು, ಆಸುಪಾಸಿನ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲಿದೆ ಎಂದವರು ಹೇಳಿದರು.
ಬಂಟ್ವಾಳ ತಾಲೂಕಿನಲ್ಲಿ ಬಿಟ್ಟು ಹೋಗಿರುವ ಸಜೀಪಮುನ್ನೂರು ಗ್ರಾಮ ಪಂಚಾಯತ್ ಆಸುಪಾಸಿನ ಐದು ಗ್ರಾಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಮುಂದಿನ ಹಂತದಲ್ಲಿ ಜಾರಿಯಾಗುವುದರಿಂದ ತಾಲೂಕಿನ ಎಲ್ಲಾ ಗ್ರಾಮಗಳೂ ಕುಡಿಯುವ ನೀರಿನ ಯೋಜನೆಗೆ ಒಳಪಡಲಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ,ಚಂದ್ರಶೇಖರ್ ಪೂಜಾರಿ ಕೊರ್ಯಾ, ಪ್ರಮುಖರಾದ ಉಮೇಶ್ ನರಿಕೊಂಬು,ಮಾಧವ ಕರ್ಬೆಟ್ಟು,ಅಲ್ಬರ್ಟ್ ಮೆನೆಜಸ್, ಪ್ರಕಾಶ್ ಕಾರಂತ್, ಉಮೇಶ್ ನಾಯಿಲ,ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು