ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮದ ಕಾಂಜಿಲಕೋಡಿ ಹಾಗೂ ಗುರುಪುರದ ನೂರಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಶುಕ್ರವಾರ ಗಂಜಿಮಠದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ರೋಗ ನಿರೋಧಕ ಲಸಿಕೆ(ವ್ಯಾಕ್ಸಿನ್) ನೀಡಲಾಯಿತು.

ಹಿರಿಯ ನಾಗರಿಕರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಗುರುಪುರ ವ್ಯಾಪ್ತಿಯ ಆಶಾ ಸುಗಮಕಾರರಾದ ಜಯಲಕ್ಷ್ಮೀ ಹಾಗೂ ಗುರುಪುರದ ಆಶಾ ಕಾರ್ಯಕರ್ತೆ ಶೋಭಾ ಎ ಅವರು ಮಿನಿ ಬಸ್ಸಿನ ವ್ಯವಸ್ಥೆ ಮಾಡಿದ್ದರು.ಲಸಿಕೆ ನೀಡಲಾದ ಸಂದರ್ಭದಲ್ಲಿ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಪಂಚಾಯತ್ ಪಿಡಿಒ ಅಬೂಬಕ್ಕರ್ ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಇತರ ಆಶಾ ಕಾರ್ಯಕರ್ತೆಯರು ಸಹಕರಿಸಿದರು.
“ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ವ್ಯವಸ್ಥೆಗೊಳಿಸಿದ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಹಿರಿಯ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇದು ಇತರರಿಗೆ ಮಾದರಿ ಕಾರ್ಯಕ್ರಮವಾಗಲಿ. ಕೋವಿಡ್ ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಲಸಿಕೆ ಪಡೆಯಲು ಭಯ ಬೇಡ” ಎಂದು ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ ಹೇಳಿದರು.