ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ಗುರುಪುರ ಕುಕ್ಕುದಕಟ್ಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಂಗಳೂರಿನಿOದ ಕೈಕಂಬದತ್ತ ಸಾಗುತ್ತಿದ್ದ ಕಾರಿಗೆ ಒಳ ರಸ್ತೆಯಿಂದ ಹೆದ್ದಾರಿಯತ್ತ ಆಗಮಿಸಿದ ಆಟೋ ರಿಕ್ಷಾವೊಂದು ಡಿಕ್ಕಿಯಾದ ಭೀಕರ ಅಪಘಾತದಲ್ಲಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಗುರುಪುರ ಕೊಳದಬದಿಯ ಮಣ್ಣಿನ ಒಳ ರಸ್ತೆ ಮೂಲಕ ಹೆದ್ದಾರಿಯತ್ತ ಆಗಮಿಸಿದ ರಿಕ್ಷಾದಲ್ಲಿ ಚಾಲಕನ ಪತ್ನಿ ಹಾಗೂ ಮತ್ತೊಬ್ಬ ಮಹಿಳೆ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ರಿಕ್ಷಾ ಚಾಲಕ ಅಶೋಕ್ ಅವರ ಪತ್ನಿಯ ಹಣೆಗೆ ಹಾಗೂ ಇನ್ನೊಬ್ಬಾಕೆಗೆ ಸಣ್ಣಪುಟ್ಟ ಗಾಯವಾಗಿದ್ದು, ಪಾಯದಿಂದ ಪಾರಾಗಿದ್ದಾರೆ. ತಲೆ, ಕೈಕಾಲು, ಮೈಗೆ ಗಂಭೀರ ಗಾಯಗೊಂಡ ಚಾಲಕನ ಸಹಿತ ಗಾಯಾಳು ಮೂವರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗಂಡ ಹೆಂಡತಿ ಮಂಗಳೂರಿನ ಕೋಡಿಕಲ್‌ನವರಾಗಿದ್ದು, ಕಾರ್ಯಕ್ರಮವೊಂದರ ಆಮಂತ್ರಣ ಪತ್ರಿಕೆ ಹಂಚಲು ಗುರುಪುರ ಕೈಕಂಬದತ್ತ ಹೋಗುತ್ತಿದ್ದರು. ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

