ಕೈಕಂಬ: ಇಲ್ಲಿನ ಮಂಗಳೂರು ಮರೈನ್ ಕಾಲೇಜು ಅಂಡ್ ಟೆಕ್ನಾಲಜಿ ಇದರ ನೇತೃತ್ವದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ – ಕರ್ನಾಟಕ ಸರ್ಕಾರ (KREDL ) ಇವರ ಸಹಯೋಗದಲ್ಲಿ ಇಂಧನ ಉಳಿತಾಯ ಮತ್ತು ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮವನ್ನು ಇತ್ತೀಚಿಗೆ ಕುಪ್ಪೆಪದವಿನಲ್ಲಿ ಆಯೋಜಿಸಲಾಗಿತ್ತು. 
ಇಂಧನ ಉಳಿತಾಯ ಮತ್ತು ಸಂರಕ್ಷಣೆ ಕುರಿತಂತೆ ಜನರಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಂದ ಕುಪ್ಪೆಪದವು ವ್ಯಾಪ್ತಿಯಲ್ಲಿ ಜಾಥಾ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಂದ್ರ ಧೋ0ಗಡಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಇಂಧನ ಉಳಿತಾಯದ ಮಹತ್ವ ಹಾಗೂ ಸಂರಕ್ಷಣೆಯ ಅಗತ್ಯದ ಕುರಿತು ಮಾತನಾಡಿದರು.
ಇಂಧನ ಉಳಿತಾಯ ಮತ್ತು ಸಂರಕ್ಷಣೆ ಕುರಿತಂತೆ ಚರ್ಚೆ, ರಸಪ್ರಶ್ನೆ ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಭಾಗ ಮುಖ್ಯಸ್ಥರುಗಳಾದ ಪ್ರೊ. ಪ್ರತಾಪ್ ರೈ ಮತ್ತು ಪ್ರೊ. ರಮೇಶ್ ಅನ್ವೇಕರ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಪ್ರೊ.ಸುನಿಲ್ ನಾಯಕ್ ವಂದಿಸಿದರು. ಕಾಲೇಜಿನ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.