ಸುದ್ದಿ9 ಬಂಟ್ವಾಳ: ಬಂಟ್ವಾಳ ಪುರಸಭಾ ಸದಸ್ಯೆ ಚಂಚಲಾಕ್ಷಿಯವರ ಮನೆಗೆ ಮರದ ಗೆಲ್ಲುಬಿದ್ದು ಅಪಾರ ಹಾನಿ ಸಂಭವಿಸಿದೆ. ಘಟನೆಯಿಂದ ಮನೆ ಗೋಡೆಗಳು ಬಿರುಕು ಬಿಟ್ಟು , ಹಂಚು, ಪಕ್ಕಾಸು ಮುರಿದು ಬಿದ್ದಿದೆ. ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಮನೆ ಪಕ್ಕವೇ ಇರುವ ಅಂಗಡಿಯೂ ಹಾನಿಗೀಡಾಗಿದೆ.
ಶನಿವಾರ ಬೆಳಿಗ್ಗೆ 8 ಗಂಟೆಯ ಸುಮರಿಗೆ ಈ ಅವಘಡ ಸಂಭವಿಸಿದೆ. ಮರದ ಗೆಲ್ಲು ಮುರಿದು ಬೀಳುತ್ತಿದ್ದ ವೇಳೆ ಚಂಚಲಾಕ್ಷಿಯವರು ಅದರಡಿಯಲ್ಲಿಯೇ ಪಾತ್ರೆ ತೊಳೆಯುತ್ತಿದ್ದರು. ಆದರೆ ಮರದ ಗೆಲ್ಲು ಮುರಿದು ಬೀಳುತ್ತಿದ್ದಂತೆಯೇ ಅವರು ತಪ್ಪಿಸಿ ಕೊಂಡ ಪರಿಣಾಮ ಪ್ರಾಣಾಪಯದಿಂದ ಪಾರಾಗಿದ್ದಾರೆ. ಅವರ ಪತಿ ಹಾಗೂ ಮಗನು ಮನೆಯಲ್ಲಿಯೇ ಇದ್ದು ಅವರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಮನೆಯ ಕೌಂಪೌಡ್ ಹೊರ ಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಮಾವಿನ ಮರದ ಗೆಲ್ಲು ಮುರಿದು ಈ ಅವಾಂತರ ಉಂಟಾಗಿದೆ. ಈ ಹಿಂದೆಯೇ ಮರದ ಗೆಲ್ಲುಗಳನ್ನು ಕಡಿದು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಪರಿಣಾಮ ಈ ಅವಘಡ ಉಂಟಾಗಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸದಸ್ಯ ವಾಸು ಪೂಜಾರಿ ಮತ್ತಿತರರು ಭೇಟಿ ನೀಡಿದ್ದಾರೆ.





