ನಾಟಕಕ್ಕೆ ಹೊಸತನವನ್ನು ನೀಡಿದ ನಾಟಕ ಬ್ರಹ್ಮ ಬಿ.ವಿ. ಕಾರಂತರ ಹುಟ್ಟೂರು ಮಂಚಿ. ರಾಷ್ಟ್ರಾದ್ಯಂತ ತಮ್ಮ ಛಾಪನ್ನು ಮೂಡಿಸಿದಂತಹ ರಂಗಾಯಣದ ಸೃಷ್ಟಿಕರ್ತ ಇವರು. ರಂಗಾಧ್ಯಯನಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ ಸಾಧನಾ ಜೀವಿಯ ಊರು ಕಾರಂತರನ್ನು ನೆನಪಿಸುತ್ತಿದೆ. ಅವರು ಬದುಕಿರುತ್ತಿದ್ದರೆ ಯಾವ ಕನಸನ್ನು ಹೊಂದಿರುತ್ತಿದ್ದರೋ ಆ ಕಾರ್ಯವನ್ನು ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಹುಟ್ಟೂರಿನ ಮಕ್ಕಳು ತಮ್ಮ ಪ್ರತಿಭೆಯನ್ನು ರಂಗದಮೂಲಕ ಪ್ರಸ್ತುತ ಪಡಿಸಲು ಹೊರಟ್ಟಿದ್ದಾರೆ. ಎಪ್ಪತನೇ ದಶಕದಲ್ಲಿ ಕಾರಂತರು ರಚಿಸಿದ ಅನುವಾದಿತ ಕೃತಿ ನೀಲಿ ಕುದುರೆಯನ್ನು ಕಾರಂತರ ಕಲ್ಪನೆಯಲ್ಲಿಯೇ ರಂಗಕ್ಕಿಳಿಸುವ ಸಾಧ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿಗಳಾದ ಪುಷ್ಪಾ, ಅಶ್ವಿತಾ, ಅಶ್ವಿನಿ, ಕೃತಿಕಾ, ಶರಣ್ಯ.ರೈ.ಕೆ, ಹರಿಚರಣ್, ಹರ್ಷಿತ್ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಸಾಗರ್, ಪ್ರಜ್ವಲ್. ಬಸವರಾಜ್, ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿಧಿ, ಈ ಮಕ್ಕಳ ನಾಟಕದಲ್ಲಿ ಭಾಗವಹಿಸುತ್ತಿದ್ದಾರೆ. ನೀಲಿ ಕುದುರೆಗೆ ವಿಶೇಷ ಮೆರುಗನ್ನು ನೀಡುತ್ತಿರುವವರು ನಿರ್ದೇಶಕರಾದ ನೀನಾಸಂನ ಮೋಹನ್ ಶೇಣಿ ಮತ್ತು ಕುಮಾರಿ ಬಿಂದು. ವಿಭಿನ್ನ ಆಯಾಮವನ್ನು ಸೃಷ್ಟಿಸಿಕೊಡಲಿರುವ ಈ ನಾಟಕ ಮಂಚಿಯ ಮಕ್ಕಳ ಕೃತಾರ್ಥ ಸೇವೆಯೂ ಆಗಲಿದೆ.
ಮಂಗಳೂರಿನ ವೇದಿಕೆ ವಿನ್ಯಾಸಗಾರ ಸ್ಪಂದನ ನಾಗರಾಜ್ ಮತ್ತು ಶ್ರೀಮತಿ ಶಾರದಾ ಎಸ್.ರಾವ್ ತಂಡದ ಬೆನ್ನೆಲುಬಾಗಿದ್ದು ಡಾ| ಗೋಪಲಾಚಾರ್ ಸಹಕಾರದೊಂದಿಗೆ ಮುಖ್ಯೋಪಾಧ್ಯಾಯರಾದ ಶ್ರೀ.ವಿ.ಶ್ರೀರಾಮಮೂರ್ತಿ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಅಧ್ಯಾಪಕವೃಂದದೊಂದಿಗೆ ತಾರಾನಾಥ ಕೈರಂಗಳ್ ಕಾರ್ಯಕ್ರಮ ಸಂಯೋಜಿಸುತ್ತಿದ್ದಾರೆ.
