ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇವರ ಜಂಟಿ ಆಶ್ರಯದಲ್ಲಿ ಆ.20 ಗುರುವಾರ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿಯ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಖೋ ಖೋ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ತಾಲೂಕಿನ ಪ್ರೌಢಶಾಲೆಗಳ ಬಾಲಕರು ಹಾಗೂ ಬಾಲಕಿಯರ ತಲಾ ಹತ್ತು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಆನಂದ ಎ ಶಂಭೂರು, ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗುರುನಾಥ ಬಾಗೇವಾಡಿ, ಶಾಲಾ ಎಸ್.ಡಿ.ಎಂಸಿ ಸದಸ್ಯರಾದ ನಾಟಿ ಕೃಷ್ಣರಾಜ ಶೆಟ್ಟಿ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಅಡ್ಯಂತಾಯ, ಕಲ್ಲಡ್ಕ ವಲಯ ಕ್ರೀಡಾಕೂಟ ಸಮಿತಿಯ ಅಧ್ಯಕ್ಷರಾದ ಗಂಗಾಧರ ರೈ ಇವರುಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ಇವರು ವಹಿಸಿಕೊಂಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬಾಗೇವಾಡಿಯವರು ಪ್ರಾಸ್ತಾವಿಕ ಮಾತುಗಳನ್ನು ಆಡುತ್ತಾ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಆಡಿ ಗೆಲ್ಲುವಂತೆ ಹಾರೈಸಿದರು. ನಾಟಿ ಕೃಷ್ಣರಾಜ ಶೆಟ್ಟಿಯವರು ಉದ್ಘಾಟನಾ ಭಾಷಣ ಮಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಾವು ಪಂದ್ಯಾಟಗಳಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಶಾಲಾ ಶಿಕ್ಷಕರಾದ ಕಮಲಾಕ್ಷ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ಚಿನ್ನಪ್ಪ ವಂದಿಸಿದರು. ಹರಿಪ್ರಸಾದ್ ಕಾರ್ಯ ಕ್ರಮ ನಿರ್ವಹಿಸಿದರು. ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕೊಡ್ಮಣ್ ಪ್ರಥಮ ಸ್ಥಾನವನ್ನೂ, ಸರಕಾರಿ ಪ್ರೌಢಶಾಲೆ ಸಾಲೆತ್ತೂರು ದ್ವಿತೀಯ ಸ್ಥಾನವನ್ನೂ ಪಡೆದು ವಿಜಯಿಗಳಾದರು. ಭಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಬೊಳಂತಿಮೊಗರು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಜಯಿಗಳಾದರು.